Advertisement

Fraud: ಉದ್ಯಮಿಗೆ ವಂಚಿಸಿದ ಆರೋಪ: ಚೈತ್ರಾಳ ಆಡಿಯೋ ಬಹಿರಂಗ

12:54 AM Sep 17, 2023 | Team Udayavani |

ಬೆಂಗಳೂರು: ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಹಾಗೂ ಗೋವಿಂದ ಪೂಜಾರಿ ಆಪ್ತ ಪ್ರಸಾದ್‌ ನಡುವಿನ ಮತ್ತೂಂದು ಆಡಿಯೋ ಬಹಿರಂಗವಾಗಿದೆ. ಈ ಆಡಿಯೋದಲ್ಲಿ ಸುನಿಲ್‌ ಕುಮಾರ್‌ ಎಂಬ ಹೆಸರೊಂದು ಪ್ರಸ್ತಾವವಾಗಿದ್ದು, ಕುತೂಹಲ ಮೂಡಿಸಿದೆ. ಪ್ರಸಾದ್‌ ಹಾಗೂ ಚೈತ್ರಾ ನಡುವಿನ ಸಂಭಾಷಣೆಯ ಆಡಿಯೋದಲ್ಲಿ 3 ಕೋ. ರೂ. ದುಡ್ಡು ತಲುಪಿಸಿರುವುದನ್ನೇ ಮುಟ್ಟಿಸಿದೆ ಎಂದು ಹೇಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಂಭಾಷಣೆಯಲ್ಲಿ ಸುನಿಲ್‌ ಕುಮಾರ್‌ ಹೆಸರನ್ನೂ ಚೈತ್ರಾ ಪ್ರಸ್ತಾವಿಸಿದ್ದಾರೆ. ಆದರೆ ಸುನಿಲ್‌ ಕುಮಾರ್‌ ಯಾರೆಂಬುದು ಸ್ಪಷ್ಟವಿಲ್ಲ.

Advertisement

ಪ್ರಸಾದ್‌ ವಿಚಾರಣೆ
ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಪ್ರಸಾದ್‌ ವಿಚಾರಣೆ ನಡೆಸಿ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣದ ಹಿಂದಿರುವ ಕಾಣದ ಕೈಗಳ ಬಗ್ಗೆ ಸಾಕ್ಷ್ಯ ಕಲೆ ಹಾಕಿ ಬಲೆಗೆ ಬೀಳಿಸಲು ಸಿದ್ಧತೆ ನಡೆಸುತ್ತಿದೆ.

ಹಾಲಶ್ರೀ ಅರ್ಜಿ ವಿಚಾರಣೆ 19ಕ್ಕೆ ಮುಂದೂಡಿಕೆ
ಅಭಿನವ ಹಾಲಶ್ರೀ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿಸಿಎಚ್‌ 57ನೇ ನ್ಯಾಯಾಲಯವು ಸೆ.19ಕ್ಕೆ ವಿಚಾರಣೆ ಮುಂದೂಡಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯವು ಸೂಚನೆ ಕೊಟ್ಟಿದೆ. ಈ ಬೆಳವಣಿಗೆ ಬೆನ್ನಲ್ಲೇ ಹಾಲಶ್ರೀಗೆ ನಿರೀಕ್ಷಣ ಜಾಮೀನು ನೀಡಬಾರದು ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ನ್ಯಾಯಾಲಯಕ್ಕೆ ಮಧ್ಯಾಂತರ ಅರ್ಜಿ ಸಲ್ಲಿಸಿದ್ದಾರೆ.

ಉದ್ಯಮಿ ವಿರುದ್ಧವೇ ದೂರು
ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಅಭಿನವ ಹಾಲಶ್ರೀ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಗೆ ಆ. 11ರಂದು ದೂರು ಕೊಟ್ಟಿದ್ದಾರೆ. ಉದ್ಯಮಿ ಗೋವಿಂದಬಾಬು ಪೂಜಾರಿ, ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಉಡುಪಿ ಜಿಲ್ಲೆ ಬೈಂದೂರಿನ ಹರ್ಷಾನಾಯ್ಕ ಹಳ್ಳಿಹೊಳೆ, ಕಾಂಗ್ರೆಸ್‌ ಸೇವಾ ದಳದ ಜಂಟಿ ಸಂಚಾಲಕ ಹರ್ಷ ಮೆಂಡನ್‌ ವಿರುದ್ಧವೂ ದೂರು ನೀಡಿದ್ದರು. ಪೊಲೀಸರು ಎನ್‌ಸಿಆರ್‌ ದಾಖಲಿಸಿದ್ದಾರೆ.

ಸ್ಥಳ ಮಹಜರು
ಸಿಸಿಬಿ ತನಿಖಾಧಿಕಾರಿಗಳು ಕೆಲವು ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ. ಉದ್ಯಮಿಯನ್ನು ಭೇಟಿಯಾದ ಬೆಂಗಳೂರಿನ ನಾರಾಯಣ ಗುರು ಕೋ-ಆಪರೇಟಿವ್‌ ಬ್ಯಾಂಕ್‌ ಹಾಗೂ ಗೋವಿಂದ ಬಾಬು ಕಚೇರಿಯಲ್ಲಿ ಸಿಸಿಬಿ ಪೊಲೀಸರು ಮಹಜರು ನಡೆಸಿ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಉದ್ಯಮಿಯನ್ನು ಆರೋಪಿಗಳು ಭೇಟಿಯಾಗಿ ಮಾತುಕತೆ ನಡೆಸಿರುವ ಮತ್ತು ದುಡ್ಡು ಪಡೆದಿರುವ ಜಾಗವನ್ನು ಪೊಲೀಸರು ಮಹಜರು ನಡೆಸಲು ಸಿದ್ಧತೆ ನಡೆಸಿದ್ದಾರೆ.

Advertisement

ತನಿಖೆ ಮುಗಿದ ಬಳಿಕವೇ ಪ್ರತಿಕ್ರಿಯೆ
ಚೈತ್ರಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿರುವುದು ಸಂಶಯಾಸ್ಪದವಾಗಿದ್ದು, ಸದ್ಯ ಆರೋಗ್ಯವಾಗಿದ್ದಾಳೆ. ಪ್ರಕರಣವು ಚುನಾವಣ ರಾಜಕೀಯಕ್ಕೆ ಸಂಬಂಧಪಟ್ಟಿದ್ದಾಗಿದ್ದು, ಇದರಲ್ಲಿ ರಾಜಕೀಯ ಪಕ್ಷಗಳು, ಕೆಲವು ನಾಯಕರ ಕೈವಾಡವಿರುವ ಸಾಧ್ಯತೆಗಳಿರುವುದರಿಂದ ತನಿಖೆ ಮುಗಿದ ಬಳಿಕವೇ ಮಾತನಾಡುವುದಾಗಿ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದುವರಿದ ಚಿಕಿತ್ಸೆ
ಎಂಆರ್‌ಐ ರಿಪೋರ್ಟ್‌ ಸೇರಿ ಬಹುತೇಕ ಎಲ್ಲ ಪರೀಕ್ಷೆಗಳಲ್ಲೂ ಚೈತ್ರಾ ಆರೋಗ್ಯ ಸ್ಥಿತಿ ಸುಸ್ಥಿರವಾಗಿದೆ ಎಂದು ತಿಳಿಸಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆ
ಯಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದೆ. ಚೈತ್ರಾ ಆರೋಗ್ಯ ದಲ್ಲಿ ಇನ್ನೂ ಕೊಂಚ ಸುಧಾರಣೆ ಆಗಬೇಕು. ಆಕೆ ನಿತ್ರಾಣಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಎಲ್ಲ ವರದಿಗಳು ನಾರ್ಮಲ್‌ ಎಂದು ಬಂದರೆ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next