ದಾವಣಗೆರೆ: ಪ್ರತಿಯೊಬ್ಬರು ಘನತೆ ಮತ್ತು ಗೌರವಯುತವಾಗಿ ಜೀವಿಸಬೇಕಾದರೆ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಬಲಗೊಳಿಸಬೇಕು ಎಂದು ಮಾಸಬ ಕಾಲೇಜು ಪ್ರಾಚಾರ್ಯ ಡಾ| ಕೆ. ಹನುಮಂತಪ್ಪ ಹೇಳಿದರು.
ಬುಧವಾರ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನದ ರಾಜ್ಯ ಮಟ್ಟದ ಕಲಾಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಏಕತೆ ಮತ್ತು ಸಮಗ್ರತೆಗಾಗಿ ಸಂವಿಧಾನದ ಆಶಯಗಳ ಉಳಿಸುವ ಮೂಲಕ ಎಲ್ಲರಲ್ಲಿ ಸಹೋದರ ಭಾವನೆ ಮೂಡಿಸುವ ದೃಢ ಸಂಕಲ್ಪ ಮಾಡಬೇಕು ಎಂದರು.
ಭಾರತ ಬ್ರಿಟಿಷರಿಂದ ಬಿಡುಗಡೆಗೊಂಡು ಸಂವಿಧಾನ ಅಳವಡಿಸಿಕೊಂಡ ನಂತರ ನಮ್ಮದೊಂದು ಹೊಸ ದೇಶವಾಯಿತು. ಹಲವು ಸಂಸ್ಕೃತಿಗಳ ಭಾರತದಲ್ಲಿ ಊಟ, ವಸತಿಯಿಂದ ಹಿಡಿದು ತತ್ವ ನಂಬಿಕೆಗಳವರೆಗೆ ಬಹುತ್ವ ಬಲಗೊಳಿಸಿದೆ. ಬಹುಜನರ ಹಿತಕ್ಕಾಗಿ ನಾವು ಬಹುತ್ವದ ಭಾರತವನ್ನು ಉಳಿಸಬೇಕಿದೆ. ಅಲ್ಲದೆ ದೇಶ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಪ್ರೊ| ವೈ.ಜೆ. ರಾಜೇಂದ್ರ ಮಾತನಾಡಿ, ರೈತ, ಕಾರ್ಮಿಕ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳಾ, ವಂಚಿತ ಸಮುದಾಯಗಳ ಮಧ್ಯೆ ಸಂವಿಧಾನದ ಆಶಯಗಳ ಕುರಿತು ಅರಿವು ಮೂಡಿಸಬೇಕು. ಸಂವಿಧಾನ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಸಮಪಾಲು-ಸಮಬಾಳು ತತ್ವ ಆಚರಣೆಗೆ ತರುವ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯ ಪಡೆಯಬೇಕಿದೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಭಾರತದ ಹಿತ ಪ್ರತಿಯೊಬ್ಬರ ಜನಸಾಮಾನ್ಯರ ಕೈಯಲ್ಲಿ ಇದೆ. ದೊಡ್ಡ ವ್ಯಾಪಾರಿ, ಸಂಸ್ಥೆಗಳಿಂದ ಮತ್ತು ಅವರ ಜೊತೆಗಾರರಾಗಿರುವ ನಾಯಕರಿಂದ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಸಂವಿಧಾನದತ್ತ ಹಕ್ಕು ಪಡೆಯಲು ಜನಸಾಮಾನ್ಯರು ಜಾಗೃತರಾಗಬೇಕು ಎಂದರು.
ಪೀಪಲ್ಸ್ ಲಾಯರ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ, ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಸೈಯ್ಯದ್ ಶಬ್ಬೀರ್‌ಸಾಬ್, ಸಫಾಯಿ ಕರ್ಮಚಾರಿ ಸಂಘದ ಡಿ.ಎಸ್. ಬಾಬಣ್ಣ ಇತರರು ಇದ್ದರು. ಸಂವಿಧಾನ ಪ್ರೀತಿ ಕಲಾ ಬಳಗದ ಕಲಾವಿದರು ಭಾರತ ಚರಿತ ಎಂಬ ರೂಪಕ ಪ್ರದರ್ಶಿಸಿದರು.