ಚಿಕ್ಕವರಿದ್ದಾಗ ನಾವು ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಿತ್ತು. ನಾನು ಅಜ್ಜಿ ಮನೆಯಲ್ಲಿಯೇ ಇರುತ್ತಿದ್ದೆ. ನಾನು ಜಾಸ್ತಿ ಆಟವಾಡಿರುವುದಾಗಲಿ, ಏನೇ ಆಗಲಿ ನನಗೆ ಈಗಲೂ ನೆನಪಿವೆ. ಅದರಲ್ಲಿಯೂ ನಾನು ಸೈಕಲ್ ಕಲಿತ ಅನುಭವ ನೆನಸಿಕೊಂಡರೆ ಈಗಲೂ ನಗೆಯುಕ್ಕುತ್ತದೆ. ಅಪ್ಪ ಕೊಡಿಸಿದ ಸೈಕಲ್ ಮೇಲೆ ತುಂಬಾ ಓಡಾಡುತ್ತಿದ್ದೆ. ನನಗೆ ನನ್ನ ಸೈಕಲ್ ಬಿಟ್ಟಿರೋಕೇ ಆಗುತ್ತಿರಲಿಲ್ಲ. ರಾತ್ರಿಯೂ ಮಲಗುವಾಗ ಕೋಣಿಯೊಳಗೆ ತಂದು ಇಟ್ಟುಕೊಳ್ಳುತ್ತಿದ್ದೆ. ಸೈಕಲ್ ಬೆಲ್ ಬಾರಿಸಲು ತುಂಬಾ ಇಷ್ಟವಾಗುತ್ತಿತ್ತು. ರಸ್ತೆಯಲ್ಲಿ ಯಾರೂ ಇಲ್ಲದಿದ್ದರೂ ಟಿಂಗ್ ಟಿಂಗ್ ಅಂತಾ ಬೆಲ್ ಹಾಕುತ್ತಿದ್ದೆ. ಸೈಕಲ್ ಕಲಿತ ಕತೆ ಹೇಳುತ್ತೇನೆ.
ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಅಪ್ಪ ಮಧ್ಯಾಹ್ನ ನಿದ್ದೆ ಹೋದ ನಂತರ ಅವರಿಗೆ ಗೊತ್ತಿಲ್ಲದಂತೆ ಸೈಕಲ್ ಕಲೀತಾ ಇದ್ದೆ. ಆಗೆಲ್ಲಾ ಸೈಕಲ್ ಬಾಡಿಗೆಗೆ ಸಿಗುತ್ತಿದ್ದವು. ಅರ್ಧ ತಾಸಿಗೆ ಒಂದು ರುಪಾಯಿ, ಒಂದು ತಾಸಿಗೆ ಎರಡು ರುಪಾಯಿಯಂತೆ ಸೈಕಲ್ ಬಾಡಿಗೆಗೆ ಸಿಗುತ್ತಿದ್ದವು. ಅವು ಚಿಕ್ಕ ಚಿಕ್ಕ ಸೈಕಲ್‌ಗಳು. ಅಜ್ಜಿ ಮನೆಯ ಹತ್ತಿರ ನನಗೆ ಕೆಲವು ಜನ ಸ್ನೇಹಿತರಿದ್ದರು. ಅವರಲ್ಲಿಗೆ ಹೋಗಿ, ಒಂದು ಸಲ ಸೈಕಲ್ ಬಿಡುವುದನ್ನು ಕಲಿಸಿಕೊಡಿ ಅಂತ ಕೇಳಿದೆ. ಅವರು ಹೂಂ ಎಂದು ನನ್ನನ್ನು ಕರೆದುಕೊಂಡು ಹೋದರು.
ನೀಲಾ ನನ್ನ ಸ್ನೇಹಿತೆ. ಅವಳಿಗೆ ಸೈಕಲ್ ಹೊಡೆದು ಅನುಭವವಿತ್ತು. ಅವಳು ಸೈಕಲ್ ಬಿಡುವುದನ್ನು ನೋಡುತ್ತಾ ನಿಂತಿದ್ದೆ. ಅವಳು ಹೊಡೆಯುತ್ತ ಹೊಡೆಯುತ್ತ ತನ್ನ ಎರಡೂ ಕೈಗಳನ್ನು ಬಿಟ್ಟು ಸಾಹಸ ಪ್ರದರ್ಶನ ಮಾಡತೊಡಗಿದಳು. ಅದನ್ನು ನೋಡಿದ ಮೇಲಂತೂ ನನಗೆ ಸೈಕಲ್ ಕಲಿಯದಿದ್ದರೂ ಚಿಂತೆಯಿಲ್ಲ, ಅದರ ಮೇಲೆ ಕುಳಿತುಕೊಳ್ಳುವ ಹಂಬಲ ಆಕಾಶ ಮುಟ್ಟಿತು. ನೀಲಾಳನ್ನು ಸೈಕಲ್ ಕೊಡೆಂದು ಕೇಳಿದೆ. ಅವಳು ಕೊಟ್ಟಳು. ಸೈಕಲ್ ಹಿಂದೆ ಕೈ ಹಿಡಿದು ಸೈಕಲ್ ಓಡಿಸು ಎಂದಳು. ನಾನು, ಹೇಗೂ ಅವಳು ಹಿಡಿದಿರುತ್ತಾಳಲ್ಲಾ ಅಂತ ಮೊದಲ ಸಾಹಸ ಪ್ರದರ್ಶನಕ್ಕೆ ಅಣಿಯಾದೆ. ಪೆಡಲ್ ತುಳಿಯುತ್ತಿದ್ದಂತೆ ಹ್ಯಾಂಡಲ್ ಅಲುಗಾಡತೊಡಗಿತು, ನಡುಗತೊಡಗಿತು. ಪೆಡಲ್ ತುಳಿಯುತ್ತಾ ಮುಂದೆ ಹೋದಂತೆ, ಎರಡು ಕೈಗಳನ್ನು ಬಿಟ್ಟೆ. ಹಾಗೂ ಹೀಗೂ ಸೈಕಲ್ ಮುಂದಕ್ಕೆ ಹೋಗುತ್ತಿತ್ತು. ಎಲ್ಲವೂ ಸರಿಯಾಗುತ್ತಿತ್ತು, ನಾನು ಹಿಂದಿರುಗಿ ನೋಡದಿದ್ದರೆ. ನಾನು ಆತ್ಮವಿಶ್ವಾಸದಿಂದ ಸೈಕಲ್ ಬಿಡುವುದನ್ನು ಕಂಡು ನೀಲಾ ತನ್ನ ಸಹಾಯಹಸ್ತ ಬಿಟ್ಟಿದ್ದಳು. ನಾನೊಬ್ಬಳೇ ಸೈಕಲ್ ತುಳಿದುಕೊಂಡು ಮುಂದಕ್ಕೆ ದೂರ ಬಂದುಬಿಟ್ಟಿದ್ದೆ. ಹಿಂದಿರುಗಿ ನೋಡಿದ ಕ್ಷಣದಲ್ಲೇ, ಅವಳು ಹಿಡಿದಿದ್ದಾಳೆಂಬ ಧೈರ್ಯದಲ್ಲಿದ್ದ ನನ್ನ ಜಂಘಾಬಲ ಉಡುಗಿತು. ಆಮೇಲೆ ಏನಾಗಬೇಕಿತ್ತೋ ಅದಾಯಿತು. ನಾನು ಸೀದಾ ಹೋಗಿ ಬಿದ್ದಿದ್ದು ಮುಳ್ಳಿನ ಕಂಟಿಯೊಳಗೆ. ಕೈ ಕಾಲಲ್ಲೆಲ್ಲ ತರಚಿದ ಗಾಯಗಳಾದವು. ಅಪ್ಪನಿಂದ ಗಾಯವನ್ನೂ, ಬಿದ್ದ ವಿಷಯವನ್ನೂ ಮುಚ್ಚಿಟ್ಟೆ.
ಸೌಮ್ಯ ಆರ್. ನಾಯಕೋಡಿ, ವಿಜಯಪುರ