Advertisement
ಬುಧವಾರ ರಾತ್ರಿ ಹಾಲಿ ಚಾಂಪಿಯನ್ ಫ್ರಾನ್ಸ್ ಮತ್ತು ಇದೇ ಮೊದಲ ಸಲ ಉಪಾಂತ್ಯ ಕಾಣುತ್ತಿರುವ ಆಫ್ರಿಕನ್-ಅರಬ್ ದೇಶವೆಂಬ ಹೆಗ್ಗಳಿಕೆಯ ಮೊರೊಕ್ಕೊ ತಂಡಗಳು ದ್ವಿತೀಯ ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಫೈನಲ್ ಚಾನ್ಸ್ ಯಾರಿಗಿದೆ ಎಂಬುದನ್ನು ಅರಿಯಲು ಇಡೀ ಫುಟ್‌ಬಾಲ್ ಲೋಕವೇ ಕಣ್ತೆರೆದು ಕೂತಿದೆ.
ಮೊರೊಕ್ಕೊ ಹೆಗ್ಗಳಿಕೆಯೆಂದರೆ, ಅದು ಈ ಕೂಟದಲ್ಲಿ ಸೋಲನ್ನೇ ಕಾಣದ ಎರಡು ತಂಡಗಳಲ್ಲೊಂದು. ಮೊದಲನೆಯದು ಕ್ರೊವೇಶಿಯ (ಈ ಸಾಲನ್ನು ಓದುವಾಗ ಕ್ರೊವೇಶಿಯದ ಭವಿಷ್ಯ ನಿರ್ಧಾರವಾಗಿರುತ್ತದೆ). ಗ್ರೂಪ್ ಹಂತದಲ್ಲಿ ಮೊರೊಕ್ಕೊಗೆ ಶರಣಾದ ತಂಡಗಳೆಂದರೆ ಬೆಲ್ಜಿಯಂ ಮತ್ತು ಕೆನಡಾ.
Related Articles
ಮೊರೊಕ್ಕೊ ಪಡೆ ಇದೇ ರಭಸದಲ್ಲಿ ಸಾಗಿದರೆ ಫ್ರಾನ್ಸ್ ಮುಂದಿರುವ ಸವಾಲು ಸುಲಭದ್ದಲ್ಲ ಎಂದೇ ಭಾವಿಸಬೇಕಾಗುತ್ತದೆ. ಒಂದು ಕಾಲದಲ್ಲಿ ಫ್ರಾನ್ಸ್‌ನ ವಸಾಹತು ಆಗಿದ್ದ ಮೊರೊಕ್ಕೊಗೆ ಫ್ರೆಂಚ್ ಸೇನೆಯನ್ನು ಸದೆಬಡಿಯಲು ಇದಕ್ಕಿಂತ ಉತ್ತಮ ಅವಕಾಶ ಇಲ್ಲವೆಂದೇ ಹೇಳಬೇಕು.
Advertisement
ಈ ಕೂಟದಲ್ಲಿ ಒಂದೇ ಒಂದು ಗೋಲು ಬಿಟ್ಟುಕೊಟ್ಟಿರುವುದು ಮೊರೊಕ್ಕೊ ಪಾಲಿನ ಹೆಗ್ಗಳಿಕೆ. ಇದನ್ನು ಬಾರಿಸಿದ್ದು ಕೆನಡಾ. ಉಳಿದ ಯಾವ ಬಲಿಷ್ಠ ತಂಡಗಳಿಗೂ ಮೊರೊಕ್ಕೊ ರಕ್ಷಣಾ ಕೋಟೆಯನ್ನು ಭೇದಿಸಲಾಗಲಿಲ್ಲ ಎಂಬುದನ್ನು ಗಮನಿಸಬೇಕು.
ಯೂಸೆಪ್ ಎನ್-ನೆಸಿರಿ, ಹಕೀಂ ಝಿಯೆಕ್, ಸೋಫಿಯಾನ್ ಬೌಫೆಲ್ ಮೊರೊಕ್ಕೊದ ಸ್ಟಾರ್ ಆಟಗಾರರು. ಜತೆಗೆ ಗಾಯಾಳು ಆಟಗಾರರ ಯಾದಿಯೂ ದೊಡ್ಡದಿದೆ. ಸೆಂಟರ್-ಬ್ಯಾಕ್ ನಯೆಫ್ ಅಗ್ಯುರ್ಡ್ ಸ್ನಾಯು ಸೆಳೆತದಿಂದ ಪೋರ್ಚುಗಲ್ ವಿರುದ್ಧ ಆಡಿರಲಿಲ್ಲ. ಬದಲಿ ಆಟಗಾರನಾಗಿ ಕಣಕ್ಕಿಳಿದ ರೊಮೇನ್ ಸೇಸ್ ಕೂಡ ಫಿಟ್‌ನೆಸ್ ಸಮಸ್ಯೆಗೆ ಸಿಲುಕಿದರು.
ಫ್ರೆಶ್ ಆಗಿದೆ ಫ್ರೆಂಚ್ ಪಡೆ2018ರ ರಷ್ಯಾ ವಿಶ್ವಕಪ್ ಕೂಟದಲ್ಲಿ ಕ್ರೊವೇಶಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದ ಫ್ರಾನ್ಸ್, ಚಾಂಪಿಯನ್ನರ ಆಟವನ್ನೇನೂ ಪ್ರದರ್ಶಿಸಿಲ್ಲ. ಚಾಂಪಿಯನ್ನರನ್ನೂ ಸೋಲಿಸಲು ಸಾಧ್ಯ ಎಂಬುದನ್ನು ಸಾಮಾನ್ಯ ತಂಡವಾದ ಟ್ಯುನೀಶಿಯ ಲೀಗ್ ಹಂತದಲ್ಲೇ ತೋರಿಸಿ ಕೊಟ್ಟಿದೆ. ಉಳಿದಂತೆ ಅದು ಲೀಗ್‌ನಲ್ಲಿ ಆಸ್ಟ್ರೇಲಿಯ, ಡೆನ್ಮಾರ್ಕ್; ನಾಕೌಟ್‌ನಲ್ಲಿ ಪೋಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದೆ. ಕೈಲಿಯನ್ ಎಂಬಪೆ ಫ್ರೆಂಚ್ ಪಡೆಯ ಅಪಾಯಕಾರಿ ಆಟಗಾರ. ಜೂಲ್ಸ್ ಕೌಂಡ್, ಥಿಯೊ ಹೆರ್ನಾಂಡೆಝ್, ಡಯಟ್ ಅಪ್‌ಮೆಕಾನೊ ಇಂಗ್ಲೆಂಡ್ ವಿರುದ್ಧ ತುಸು ಅಧೀರರಾಗಿದ್ದರು. ಆದರೆ ಫ್ರಾನ್ಸ್‌ನ ನಾಕೌಟ್ ಪಂದ್ಯಗಳಾವುವೂ ಹೆಚ್ಚುವರಿ ಅವಧಿಗೆ ವಿಸ್ತರಿಸದೇ ಇದ್ದುದರಿಂದ ಆಟಗಾರೆಲ್ಲ ಹೆಚ್ಚು ಫ್ರೆಶ್ ಆಗಿದ್ದಾರೆ ಎನ್ನಲಡ್ಡಿಯಿಲ್ಲ.