Advertisement
ದೇವದೂತರಿಗೆ ನಗು ಬಂದಿತು. “”ಎಲ್ಲರೂ ಹೀಗೆಯೇ ಹೇಳುತ್ತಾರೆ. ಭೂಮಿಯನ್ನು ಬಿಟ್ಟುಹೋಗಲು ಯಾರಿಗೂ ಮನಸ್ಸಿರುವುದಿಲ್ಲ. ಇಷ್ಟಕ್ಕೂ ನೀನು ಬದುಕಿ ಇಲ್ಲಿ ಮಾಡಬೇಕಾದ ಕೆಲಸವಾದರೂ ಏನಿದೆ?” ಎಂದು ಕೇಳಿದರು. “”ಇಲ್ಲಿ ಸಿಗುವ ಸುಖದ ಮೇಲೆ ಆಶೆಯಿಟ್ಟು ನಾನು ಸಾವು ಬೇಡ ಎಂದು ಹೇಳುವುದಲ್ಲ, ನನ್ನ ಮಗ ಇನ್ನೂ ಚಿಕ್ಕವನು. ಅತಿಶಯವಾಗಿ ಅವನನ್ನು ಪ್ರೀತಿಸುತ್ತಿದ್ದೇನೆ. ಯಾವ ಕೆಲಸವನ್ನೂ ಮಾಡಲು ಅವನಿಗೆ ಗೊತ್ತಿಲ್ಲ. ಒಂದು ಹೊತ್ತಿನ ಕೂಳನ್ನೂ ಸಂಪಾದಿಸಿ ತರಲು ಅವನಿಂದಾಗದು. ಅವನು ಸ್ವಂತ ಕಾಲಿನ ಮೇಲೆ ನಿಲ್ಲುವ ವರೆಗಾದರೂ ನನ್ನ ಬೆಂಬಲ ಅವನಿಗೆ ಬೇಕಾಗುತ್ತದೆ” ಎಂದಳು ಗೂಸ್.
Related Articles
Advertisement
ಜಾಕ್ ತಂದ ಮೊಟ್ಟೆಯನ್ನು ಕಣ್ಣರಳಿಸಿ ನೋಡಿದ ವರ್ತಕ ಅದು ಶುದ್ಧ ಚಿನ್ನದ್ದೆಂಬುದನ್ನು ನಿರ್ಧರಿಸಿದ. ಆದರೆ, ಹುಡುಗ ತೀರ ಅಮಾಯಕನೆಂಬುದನ್ನೂ ಅರಿತುಕೊಂಡ. ಮುಖದಲ್ಲಿ ಕೋಪ ತಂದುಕೊಂಡು, “”ಇದು ಚಿನ್ನದ್ದೆಂದು ನಿನಗೆ ಯಾರು ಹೇಳಿದವರು? ಹಿತ್ತಾಳೆಯ ಮೊಟ್ಟೆಯನ್ನು ತಂದು ಚಿನ್ನ ಎಂದು ನಂಬಿಸಲು ಯತ್ನಿಸಿದರೆ ಮೋಸವಾಗುತ್ತದೆ. ರಾಜಭಟರನ್ನು ಕರೆಸಿದರೆ ನಿನ್ನನ್ನು ಬಂಧಿಸಿಕೊಂಡು ಹೋಗಿ ಶಿಕ್ಷೆ ವಿಧಿಸುತ್ತಾರೆ” ಎಂದು ಹೆದರಿಸಿದ. ಜಾಕ್ ಹೆದರಿಬಿಟ್ಟ. “”ಅಯ್ಯಯ್ಯೋ, ಹಾಗೆ ಮಾಡಬೇಡಿ. ನನಗೆ ಅದು ಚಿನ್ನಧ್ದೋ ಹಿತ್ತಾಳೆಯದೋ ನಿಜವಾಗಿ ಗೊತ್ತಿಲ್ಲ. ಅದಕ್ಕೆ ಎಷ್ಟು ಬೆಲೆ ಸಿಗುತ್ತದೋ ಅಷ್ಟನ್ನೇ ಕೊಡಿ” ಎಂದು ಬೇಡಿಕೊಂಡ.
ಮನಸ್ಸಿನೊಳಗೆ ವರ್ತಕನಿಗೆ ನಗು ಬಂತು. ಮೊಟ್ಟೆಯನ್ನು ತಿಜೋರಿಗೆ ಸೇರಿಸಿದ. ಅತ್ಯಲ್ಪ$ ಹಣವನ್ನು ಕೊಟ್ಟು ಜಾಕ್‌ನನ್ನು ಸಾಗಹಾಕಿದ. ಅಂದಿನ ಊಟದ ಸಮಸ್ಯೆ ನೀಗಿತು ಎಂದು ಜಾಕ್ ಊಟ ಮಾಡಿ ಮನೆಗೆ ಬಂದು ಬಾತುಕೋಳಿಯೊಂದಿಗೆ ಸಂತೋಷವಾಗಿ ಕಳೆದ. ಮರುದಿನ ಬೆಳಗಾಯಿತು. ಬಾತು ಇನ್ನೊಂದು ಮೊಟ್ಟೆ ಇಟ್ಟಿತು. ಜಾಕ್ ಅದೇ ವರ್ತಕನ ಬಳಿಗೆ ಮೊಟ್ಟೆಯೊಂದಿಗೆ ಹೋದ. ಅವನು ನೀಡಿದ ಹಣವನ್ನು ತೆಗೆದುಕೊಂಡ. ಹೀಗೆ ದಿನವೂ ನಡೆಯತೊಡಗಿತು.
ಒಂದು ದಿನ ಜಾಕ್ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದ. ಆ ದೇಶದ ರಾಜಕುಮಾರಿ ವನವಿಹಾರಕ್ಕೆಂದು ಅಲ್ಲಿಗೆ ಬಂದಿದ್ದಳು. ಕಳ್ಳರ ಗುಂಪೊಂದು ಅವಳ ಮೈಮೇಲಿರುವ ಆಭರಣಗಳನ್ನು ಕಂಡು ಮುತ್ತಿಗೆ ಹಾಕಿತು. ರಾಜಕುಮಾರಿ ಭಯದಿಂದ ಕೂಗಿಕೊಂಡಳು. ಅದನ್ನು ಕೇಳಿ ಜಾಕ್ ಓಡಿಬಂದ. ಕಳ್ಳರೊಂದಿಗೆ ಹೋರಾಡಿ ದೂರ ಓಡಿಸಿದ. ರಾಜಕುಮಾರಿಯನ್ನು ಅರಮನೆಯ ವರೆಗೆ ಕರೆತಂದ. ಅವನು ಮನೆಗೆ ಹೊರಟಾಗ ಅವನನ್ನು ಕಳುಹಿಸಿಕೊಡಲು ಅವಳಿಗೆ ಸಂಕಟವಾಯಿತು. ತನ್ನ ಜೀವ ಉಳಿಸಿದ ಅವನನ್ನೇ ಮದುವೆಯಾಗಬೇಕೆಂದು ಅವಳು ನಿರ್ಧರಿಸಿದ್ದಳು. “”ನನ್ನ ಜೊತೆಗೆ ಅರಮನೆಗೆ ಬಾ. ನಿನ್ನನ್ನು ಕಂಡರೆ ನಮ್ಮವರು ತುಂಬ ಸಂತೋಷಪಡುತ್ತಾರೆ” ಎಂದು ಕರೆದಳು. ತಂದೆಯ ಬಳಿಗೆ ಜಾಕ್‌ನನ್ನು ಕರೆದುಕೊಂಡು ಹೋಗಿ ಕಳ್ಳರಿಂದ ಅವನು ತನ್ನನ್ನು ಪಾರು ಮಾಡಿದ ಕತೆಯನ್ನು ಹೇಳಿದಳು.
ರಾಜನು, “”ನಿನ್ನನ್ನು ಅವನು ಕಾಪಾಡಿದ ಕಾರಣಕ್ಕೆ ನೀನು ಅವನ ಕೈಹಿಡಿಯಲು ನಿರ್ಧರಿಸಿದ್ದರೆ ಅದಕ್ಕೆ ಅವಕಾಶವಿಲ್ಲ. ಯಾಕೆಂದರೆ ನಾನು ನಿನ್ನನ್ನು ಅತಿ ಶ್ರೀಮಂತನಾದ ಒಬ್ಬ ವರ್ತಕನಿಗೆ ಮದುವೆ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದೇನೆ. ಆ ವರ್ತಕನು ಈಗ ನನ್ನ ಮುಂದೆಯೇ ಇದ್ದಾನೆ. ನೋಡು ಅವನ ಬಳಿಯಿರುವ ಚಿನ್ನದ ಬಾತುಕೋಳಿಯ ಮೊಟ್ಟೆಗಳನ್ನು ತಂದು ಇಲ್ಲಿರಿಸಿದ್ದಾನೆ” ಎಂದು ರಾಜ ವರ್ತಕನನ್ನೂ ಮೊಟ್ಟೆಗಳನ್ನೂ ತೋರಿಸುತ್ತ ಹೇಳಿದ.
ಜಾಕ್ ವರ್ತಕನೆಡೆಗೆ ನೋಡಿದ. ತನ್ನ ಬಳಿಯಿಂದ ಖರೀದಿ ಮಾಡಿದ್ದ ಮೊಟ್ಟೆಗಳನ್ನು ಅವನು ತಂದು ರಾಜನ ಮುಂದಿರಿಸಿದ್ದ. ತನಗೆ ಅವನು ಮೋಸ ಮಾಡಿರುವುದು ಅರ್ಥವಾದ ಕೂಡಲೇ ಜಾಕ್, “”ಮಹಾರಾಜರೇ, ಅವನ ಬಳಿಯಿರುವುದು ಚಿನ್ನದ ಮೊಟ್ಟೆಗಳು ಮಾತ್ರ ತಾನೆ? ಆದರೆ ನನ್ನ ಬಳಿ ಈ ಮೊಟ್ಟೆಗಳನ್ನಿಡುವ ಬಾತುಕೋಳಿಯೇ ಇದೆ!” ಎಂದು ಕೂಗಿಕೊಂಡ. ರಾಜನು ಕುತೂಹಲದಿಂದ, “”ಏನು, ನಿನ್ನ ಬಳಿ ಅಂತಹ ಬಾತುಕೋಳಿಯಿದೆಯೆ? ಸುಳ್ಳಾಡಿದರೆ ನಿನಗೆ ಶಿಕ್ಷೆಯಾಗುತ್ತದೆ. ನಿನ್ನ ಮಾತು ಸತ್ಯವಾದರೆ ನೀನು ಅವನಿಗಿಂತ ಧನಿಕನೇ ಸರಿ. ನೀನೇ ನನ್ನ ಅಳಿಯನಾಗುವೆ” ಎಂದು ಹೇಳಿದ. ಜಾಕ್ ಮನೆಗೆ ಹೋದ. ಬಾತುಕೋಳಿಯನ್ನು ಎತ್ತಿಕೊಂಡು ರಾಜಸಭೆಗೆ ಬಂದ. ಕೋಳಿಯು ರಾಜನ ಮುಂದೆಯೇ ಚಿನ್ನದ ಮೊಟ್ಟೆಯನ್ನಿರಿಸಿತು.
“”ದೊರೆಯೇ, ವರ್ತಕನು ತಂದಿರುವ ಮೊಟ್ಟೆಗಳು ನನ್ನ ಬಾತುಕೋಳಿಯದೇ. ಇವನು ನನಗೆ ಮೋಸ ಮಾಡಿದ್ದಾನೆ” ಎಂದು ಜಾಕ್ ನಡೆದ ವಿಷಯವನ್ನು ಹೇಳಿದ. ರಾಜನು ವರ್ತಕನ ಎಲ್ಲಾ ಸಂಪತ್ತನ್ನು ಸ್ವಾಧೀನ ಮಾಡಿಕೊಂಡು ದೇಶದಿಂದಲೇ ಅವನನ್ನು ಓಡಿಸಿದ. ರಾಜನ ಮಗಳು ಜಾಕ್‌ನ ಕೈಹಿಡಿದಳು. ಮದುವೆಯ ಮರುದಿನ ನೋಡಿದರೆ ಬಾತುಕೋಳಿ ಮಾಯವಾಗಿ ಹೋಗಿತ್ತು. ರಾಜನು ಅದಕ್ಕಾಗಿ ಕಳವಳಪಡಲಿಲ್ಲ. “”ವರ್ತಕನಿಂದ ನಾವು ಪಡೆದುಕೊಂಡ ಮೊಟ್ಟೆಗಳು ಸಾಕಷ್ಟಿವೆ. ನಮಗೆ ಅಷ್ಟೇ ಸಾಕು” ಎಂದು ತೃಪ್ತಿಯಿಂದ ಹೇಳಿದ. ಬಾತುಕೋಳಿಯಾಗಿದ್ದ ಗೂಸ್ ಮಗನಿಗೆ ಸುಖಜೀವನಕ್ಕೆ ವ್ಯವಸ್ಥೆಯಾಯಿತೆಂದು ತಿಳಿದು ಸಂತೋಷದಿಂದ ದೇವರ ಬಳಿಗೆ ಹೊರಟುಹೋದಳು.
ಪ. ರಾಮಕೃಷ್ಣ ಶಾಸ್ತ್ರಿ