ಉಳ್ಳಾಲ: ವೈದ್ಯಕೀಯ ವೃತ್ತಿ ಜೀವನದಲ್ಲಿ ಹಣ ಸಂಪಾದಿಸುವುದು ಸುಲಭ. ಆದರೆ ಹಣವೇ ಮುಖ್ಯವಲ್ಲ. ಸಮಾಜದಲ್ಲಿ ಗೌರವಯುತ ವೈದ್ಯರಾಗಿ ರೋಗಿಗಳ ಸೇವೆ ಮಾಡುವ ಗುರಿಯೊಂದಿಗೆ ಕಾರ್ಯ ನಿರ್ವಹಿಸಿದಾಗ ವೃತ್ತಿ ಜೀವನದಲ್ಲಿ ಯಶಸ್ವಿ ವೈದ್ಯರಾಗಲು ಸಾಧ್ಯ ಎಂದು ಯೇನಪೊಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಂ. ವಿಜಯ ಕುಮಾರ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 27ನೇ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು. ಪ್ರಾರ್ಥನೆ, ತಾಳ್ಮೆ, ಗ್ರಹಿಸುವಿಕೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಕಾಣಬಹುದಾಗಿದೆ. ತರಗತಿಯಲ್ಲಿ ಕುಳಿತು ಪದವಿಯನ್ನು ಪಡೆಯುವುದು ಪರಿಶ್ರಮ ಹಾಗೂ ಪ್ರತಿಭೆಯ ಸಂಕೇತ ವಾಗಿದ್ದು ಅದೇ ರೀತಿಯಲ್ಲಿ ಮುಂದೆ ವೃತ್ತಿಪರ ಜೀವನದಲ್ಲಿ ಸರಳತೆಯ ಜತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳುವ ಗುಣವನ್ನು ಹೊಂದುವ ಮೂಲಕ ಸಮಾಜಕ್ಕೆ ಉತ್ತಮವಾದ ರೀತಿಯಲ್ಲಿ ಜೀವನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತದ ಧರ್ಮಗುರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಅಧ್ಯಕ್ಷ ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಮಾತನಾಡಿ, ಫಾ| ಮುಲ್ಲರ್ ಸಂಸ್ಥೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡುತ್ತಿದ್ದು ಇದನ್ನು ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯತೆಯ ಜತೆಗೆ ಬಡವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ ಎಂದರು.
ಪದವಿ ಪ್ರದಾನ ಕಾರ್ಯಕ್ರಮದಲ್ಲಿ 79 ಹೋಮಿಯೋ ಪತಿ ಪದವಿ ಹಾಗೂ 23 ಹೋಮಿಯೋಪತಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ನಡೆಸಿದ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಐದು ಪದವಿ ವಿದ್ಯಾರ್ಥಿಗಳು 7 ಸ್ನಾತ ಕೋತ್ತರ ವಿದ್ಯಾರ್ಥಿಗಳು 2 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.
ಫಾದರ್ ಮುಲ್ಲರ್‌ನ ಪ್ರಭಾರ ನಿರ್ದೇಶಕ ರೆ| ಫಾ| ರಿಚರ್ಡ್ ಕುವೆಲ್ಲೊ ಸ್ವಾಗತಿಸಿದರು. ಹೋಮಿಯೋಪಥಿ ವಿಭಾಗದ ಪ್ರಾಂಶುಪಾಲ ಡಾ| ಶಿವಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಡಾ| ಆಲೋಕ್ ರಾಮ್‌ದಾಸ್ ಪದವೀಧರರ ವಿವರ ನೀಡಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಫಾ| ವಿನ್ಸೆಂಟ್ ಸಲ್ದಾನ್ಹ ವಂದಿಸಿದರು. ಡಾ| ದೀಪಾ ಸಲ್ದಾನ ನಿರ್ವಹಿಸಿದರು.