Advertisement

ಮುಂದಿನ ಮಾರಿಕಾಂಬಾ ಜಾತ್ರೆಯೊಳಗೆ ಚತುಷ್ಪಥ ರಸ್ತೆ ಲೋಕಾರ್ಪಣೆಗೆ ಚಿಂತನೆ ; ಶಾಸಕ ಹಾಲಪ್ಪ

07:28 PM Apr 04, 2022 | Team Udayavani |

ಸಾಗರ: ಮುಂದಿನ ವರ್ಷ ನಡೆಯಲಿರುವ ಮಾರಿಕಾಂಬಾ ಜಾತ್ರೆಯೊಳಗೆ ಚತುಷ್ಪಥ ರಸ್ತೆಯನ್ನು ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಬಿಎಚ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಗಲೀಕರಣಕ್ಕೆ ಬೇಕಾದ ಅಗತ್ಯ ಸಿದ್ದತೆ ನಡೆದಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಅವರ ಕಾಳಜಿಯಿಂದಾಗಿ 77 ಕೋಟಿ ರೂ. ಮಂಜೂರು ಆಗಿದೆ. ಆರಂಭದಲ್ಲಿ ತ್ಯಾಗರ್ತಿ ಕ್ರಾಸ್‌ನಿಂದ ಅಗಲೀಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಲಾಗಿತ್ತು. ಇದೀಗ ನಗರ ಬೆಳೆಯುತ್ತಿರುವುದರಿಂದ ಬಳಸಗೋಡು ಗ್ರಾಮದಿಂದ ಅಗಲೀಕರಣ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ನಾಲ್ಕು ಸೇತುವೆ ನಿರ್ಮಾಣಕ್ಕೆ ಸಹ ಮಂಜೂರಾತಿ ದೊರೆತಿದೆ ಎಂದು ಹೇಳಿದರು.

ನಗರವ್ಯಾಪ್ತಿಯ ಅಗ್ರಹಾರ ವೃತ್ತ, ಶಿವಪ್ಪನಾಯಕ ವೃತ್ತ ಹಾಗೂ ಚಾಮರಾಜಪೇಟೆ ವೃತ್ತವನ್ನು ಅತ್ಯಾಕರ್ಷಕವಾಗಿ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿ ಸಂಬಂಧಪಟ್ಟ ವಿಭಾಗದ ತಾಂತ್ರಿಕರಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆ ನಗರದ ಜನರ ಬಹುಕಾಲದ ಬೇಡಿಕೆಯಾಗಿರುವ ಚತುಷ್ಪಥ ರಸ್ತೆ ನಿರ್ಮಾಣದ ಕನಸು ಆದಷ್ಟು ಶೀಘ್ರವಾಗಿ ನನಸು ಮಾಡುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ : ಪಾಕ್ ಹಂಗಾಮಿ ಪ್ರಧಾನಿಯಾಗಿ ಗುಲ್ಜಾರ್ ಅಹ್ಮದ್ ನಾಮ ನಿರ್ದೇಶನ

Advertisement

ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಪರಮರೆಡ್ಡಿ ಮಾತನಾಡಿ, ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ. ಎರಡು ವರ್ಷ ಕಾಲಾವಧಿ ಗುತ್ತಿಗೆದಾರನಿಗೆ ನೀಡಲಾಗಿದ್ದು, ಒಂದೂವರೆ ವರ್ಷದೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ವಿವಿಧ ತೊಡಕುಗಳನ್ನು ಬಗೆಹರಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಅಭಿಯಂತರ ರಮೇಂದ್ರ, ಯೋಜನಾಧಿಕಾರಿ ಪೀರ್ ಪಾಷಾ, ಎಇಇ ಎನ್.ನಿಂಗಪ್ಪ, ಸಹಾಯಕ ಅಭಿಯಂತರ ಜಿ. ಈಶ್ವರ್, ಸಂಪರ್ಕಾಧಿಕಾರಿ ತಿಮ್ಮಾರೆಡ್ಡಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶ ಪ್ರಸಾದ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next