Advertisement

ಚಾ.ನಗರ ಟಿಕೆಟ್‌ಗೆ ಬಿಜೆಪಿಯಲ್ಲಿ ನಾಲ್ವರ ಸಿಂಡಿಕೇಟ್‌

05:53 AM Dec 29, 2018 | Team Udayavani |

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಹೊರಗಿನವರಿಗೆ ಟಿಕೆಟ್‌ ನೀಡದೆ, ಸ್ಥಳೀಯರಾದ ನಮ್ಮಲ್ಲಿ ಒಬ್ಬರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಮುಖಂಡರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

Advertisement

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವರಾದ ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ವಿಧಾನಪರಿಷತ್‌ ಮಾಜಿ ಸದಸ್ಯ ಸಿ.ರಮೇಶ್‌ ಹಾಗೂ ಚಾಮರಾಜ ನಗರ ಜಿಪಂ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ನಾವು ಆಕಾಂಕ್ಷಿಗಳಾಗಿದ್ದು, ನಮ್ಮಲ್ಲಿ ಯಾರದರೂ ಒಬ್ಬರಿಗೆ ಟಿಕೆಟ್‌ ನೀಡಿದರೆ ಒಟ್ಟಾಗಿ ದುಡಿದು ಗೆಲ್ಲಿಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

2 ಬಾರಿ ಸ್ಪರ್ಧೆ: ಕೋಟೆ ಎಂ.ಶಿವಣ್ಣ ಮಾತನಾಡಿ, ಚಾಮರಾಜ ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿ, ಎಸ್‌.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಿದ್ದು, ಬೇರೆ ಪಕ್ಷಗಳಿಂದ ಎರಡು ಬಾರಿ ಚಾಮರಾಜ ನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.

ಪಕ್ಷ ಸಂಘಟನೆ: ಜಿ.ಎನ್‌.ನಂಜುಂಡಸ್ವಾಮಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿದ್ದು ಸಂಘಟನೆಯಲ್ಲಿ ತೊಡಗಿರುವುದಾಗಿ ಹೇಳಿದರು.

ಪ್ರಸಾದ್‌ ಬೆಂಬಲಿಸಲಿ: ಸಿ.ರಮೇಶ್‌ ಮಾತನಾಡಿ, ಪಕ್ಷದ ಹಿರಿಯ ನಾಯಕರಾಗಿರುವ ವಿ.ಶ್ರೀನಿವಾಸಪ್ರಸಾದ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವಾಗಲೀ, ತಮ್ಮ ಕುಟುಂಬದವರಾಗಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಅವರು ನಮಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು. 

Advertisement

ಕೆ.ಶಿವರಾಂಗೆ ಭರವಸೆ ನೀಡಿಲ್ಲ: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಓಡಾಡುತ್ತಾ ತಾವೇ ಅಭ್ಯರ್ಥಿ ಎಂಬಂತೆ ಹೇಳಿಕೆಗಳನ್ನು ಕೊಡುತ್ತಿದ್ದುದನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದು, ಅವರು ಶಿವರಾಂಗೆ ಟಿಕೆಟ್‌ ಭರವಸೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಜೊತೆಗೆ ಕ್ಷೇತ್ರಕ್ಕೆ ಹೊರಗಿನವರು ಬಂದು ಸ್ಪರ್ಧೆ ಮಾಡಿದಾಗ ಜನ ಬೆಂಬಲಿಸುವುದಿಲ್ಲ ಎಂಬುದು ಈ ಹಿಂದೆ ಶಿವಲಿಂಗಯ್ಯ, ರೇವಣಸಿದ್ದಯ್ಯ, ಸುಭಾಷ್‌ ಭರಣಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಜನ ಸ್ವೀಕಾರ ಮಾಡಿಲ್ಲ ಎಂದು ಕೋಟೆ ಶಿವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next