ಹೊಸದಿಲ್ಲಿ: ಕರ್ನಾಟಕದಲ್ಲಿ ದೇಶದ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಶನಿವಾರ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕುಪೀಡಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಗುಜರಾತ್‌ನ ಜಾಮ್‌ನಗರಕ್ಕೆ ಜಿಂಬಾಬ್ವೆಯಿಂದ ಬಂದಿದ್ದ ವ್ಯಕ್ತಿಗೆ ಒಮಿಕ್ರಾನ್ ರೂಪಾಂತರಿ ಹರಡಿರುವುದು ಶನಿವಾರ ಮಧ್ಯಾಹ್ನ ದೃಢಪಟ್ಟಿದೆ. ಸಂಜೆ ವೇಳೆಗೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ದುಬಾೖ ಮೂಲಕ ದಿಲ್ಲಿಗೆ ಬಂದು, ಅಲ್ಲಿಂದ ಮುಂಬಯಿ ತಲುಪಿದ್ದ 33ರ ವ್ಯಕ್ತಿಗೆ ಒಮಿಕ್ರಾನ್ ಸೋಂಕು ಇರುವುದು ಸ್ಪಷ್ಟವಾಗಿದೆ. ಅವರಿಗೆ ಅಲ್ಪಪ್ರಮಾಣದ ಜ್ವರವಿತ್ತು. ಬೇರೆ ಯಾವ ರೋಗಲಕ್ಷಣವೂ ಕಂಡುಬಂದಿಲ್ಲ. ಪ್ರಸ್ತುತ ಕಲ್ಯಾಣ್-ಡೊಂಬಿವಿಲಿ ಕೋವಿಡ್‌ಕೇರ್ ಸೆಂಟರ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ 35 ಸಂಪರ್ಕಿತರನ್ನು ಪರೀಕ್ಷಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಗಳಿಗೆ ಕೇಂದ್ರದ ಪತ್ರ :
ಒಮಿಕ್ರಾನ್ ಭೀತಿಯ ನಡುವೆಯೇ ಕರ್ನಾಟಕ, ಕೇರಳ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಹಾಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರಕಾರ, ಈ ರಾಜ್ಯಗಳಿಗೆ ಶನಿವಾರ ಪತ್ರ ಬರೆದಿದೆ. “ಪರೀಕ್ಷೆ ಹೆಚ್ಚಳ- ಟ್ರ್ಯಾಕ್- ಚಿಕಿತ್ಸೆ- ಲಸಿಕೆ ವಿತರಣೆ- ಕೊರೊನಾ ಮಾರ್ಗಸೂಚಿ ಪಾಲನೆ’ ಕಾರ್ಯತಂತ್ರವನ್ನು ಅನುಸರಿಸುವ ಮೂಲಕ ಸೋಂಕಿನ ಪ್ರಸರಣಕ್ಕೆ ಕಡಿವಾಣ ಹಾಕುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಕೋವಿಡ್‌ನ 3 ಪ್ರಕರಣಗಳು ಕಂಡುಬಂದಲ್ಲಿ “ಕ್ಲಸ್ಟರ್’ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಶಾಲೆ ಮತ್ತು ಹಾಸ್ಟೆಲ್ ಕ್ಲಸ್ಟರ್ ಮತ್ತು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ಕ್ಲಸ್ಟರ್ ಎಂದು ಎರಡು ವಿಧದಲ್ಲಿ ಕ್ಲಸ್ಟರ್ ನಿರ್ವಹಣೆಗೆ ಸೂಚಿಸಲಾಗಿದೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ