ಗದಗ: ಜಿಲ್ಲೆಯ ಬೆಣ್ಣೆಹಳ್ಳದಲ್ಲಿ ಕೊಚ್ಚಿಹೋದವರ ರಕ್ಷಣೆಗಾಗಿ ನಾಲ್ಕನೇ ದಿನವಾದ ಮಂಗಳವಾರವೂ ಎನ್ ಡಿಆರ್ ಎಫ್ ತಂಡದಿಂದ ಶೋಧ ಕಾರ್ಯ ನಡೆಯಿತು.
ಜಿಲ್ಲೆ ರೋಣ ತಾಲೂಕಿನ ಮಾಳವಾಡ ಸಮೀಪದ ಮಲಪ್ರಭ ನದಿ, ಬೆಣ್ಣೆಹಳ್ಳದ ಸಂಗಮ ಸ್ಥಳದಲ್ಲಿ ಅ.26 ರಂದು ಸಂಜೆ ಹದ್ಲಿ ಗ್ರಾಮದ
ಕಳಸಪ್ಪ(30) ಈರಣ್ಣ(15) ಬೆಣ್ಣೆಹಳ್ಳದಲ್ಲಿ ಕೊಚ್ಚಿಹೋಗಿದ್ದರು.
ಅಮವಾಸ್ಯೆ ಅಂಗವಾಗಿ ಮನೆ ದೇವರಿಗೆ ಗಂಗಪೂಜೆ ನೆರವೇರಿಸಲು ನೀರು ತರಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
ಅಂದು ರಾತ್ರಿಯೇ ರೋಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಅ.27 ರಿಂದ ಎನ್ ಡಿಆರ್ ಎಫ್ ತಂಡ ಅವಿರತವಾಗಿ ಹುಡುಕಾಟ ನಡೆಸುತ್ತಿದ್ದರೂ, ಕೊಚ್ಚಿ ಹೋದವರ ಸುಳಿವು ಸಿಕ್ಕಿಲ್ಲ.
ಕಳೆದ ರಾತ್ರಿಯಿಂದ ಹಳ್ಳ ಹಾಗೂ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದು, ದೋಣಿಯೂ ಮುಂದೆ ಸಾಗುತ್ತಿಲ್ಲ. ಹೀಗಾಗಿ ಎನ್ ಡಿಆರ್ ಎಫ್, ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಕಾಲ್ನಡಿಗೆಯಲ್ಲೇ ಹುಡುಕಾಟ ನಡೆಸುತ್ತಿದ್ದಾರೆ.