Advertisement
ಐದು ದಶಕಗಳ ಬೇಡಿಕೆಯ ಮಹದಾಯಿ ಮಲಪ್ರಭೆ ಜೋಡಣೆಗೆ 2015 ಜು.16ರಂದು ವಿವಿಧ ಸಂಘಟನೆಗಳೊಂದಿಗೆ ರೈತ ಸೇನಾ- ಕರ್ನಾಟಕ ಪಟ್ಟಣದ ಹೆದ್ದಾರಿ ಬದಿಗಿರುವ ಹುತಾತ್ಮ ರೈತ ದಿ.ಈರಪ್ಪ ಕಡ್ಲಿಕೊಪ್ಪರ ವೀರಗಲ್ಲಿನ ಎದುರು ವೇದಿಕೆ ನಿರ್ಮಿಸಿ ನಿರಂತರ ಚಳವಳಿ ಪ್ರಾರಂಭಿಸಿತು. ಮಹದಾಯಿ ನದಿಯಲ್ಲಿ ರಾಜ್ಯದ ಪಾಲು, ಕಳಸಾ-ಬಂಡೂರಿ ನಾಲೆಗಳ 7.56 ಟಿಎಂಸಿ ಅಡಿ ನೀರಿನ ಬೇಡಿಕೆಯೊಂದಿಗೆ ಬೆರಳೆಣಿಕೆ ರೈತರಿಂದ ಚಾಲನೆ ಪಡೆದ ಈ ಹೋರಾಟದ ಮಹತ್ವ, ಉದ್ದೇಶ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಾಗೃತಿ ಮೂಡಿಸಿತು. ದಿನದಿಂದ ದಿನಕ್ಕೆ ಕಾವು ಪಡೆದು ದಿನ ಕಳೆದಂತೆ ಮಣ್ಣಿನ ಮಕ್ಕಳು ಸಮರೋಪಾದಿಯಲ್ಲಿ ಸಾಗಿಬಂದು ಹೋರಾಟದ ಸ್ವರೂಪವನ್ನೇ ಬದಲಿಸಿದ್ದು ದಾಖಲಾರ್ಹ ಚಳವಳಿ ಎನಿಸಿಕೊಂಡಿತು.
Related Articles
Advertisement
ವರ್ಷದುದ್ದಕ್ಕೂ ನಿರಂತರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್, ಧರಣಿ, ಪ್ರತಿಭಟನೆ ಸೇರಿ ಒಂದು ಹೋರಾಟದಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ಮೀರಿ ಎಲ್ಲ ಹಂತದ ಹೋರಾಟಕ್ಕೆ ಸಾಕ್ಷಿಯಾದ ಮಹದಾಯಿ ಚಳವಳಿಯನ್ನು ಬೆಂಬಲಿಸಿ ಹಿಂದೆ ಸರಿದ ರಾಜಕೀಯ ನಾಯಕರ ಭವಿಷ್ಯವನ್ನು ನಿರ್ಧರಿಸುವ ಮಟ್ಟಕ್ಕೆ ಚಳವಳಿ ಬೆಳೆದು ನಿಂತಿದೆ.
ಸನ್ಯಾಸ ದೀಕ್ಷೆ: ಹೋರಾಟ ಹುಟ್ಟುಹಾಕಿದ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ 2016 ಅ.17ರಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ಮಹತ್ವದ ಘಟ್ಟಗಳಲ್ಲಿ ಒಂದು. ಸುದೀರ್ಘ 4 ವರ್ಷ ಕಳೆದರೂ ಹೋರಾಟಕ್ಕೆ ಜಯ ತಂದುಕೊಡುವಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಆಕ್ರೋಶದ ಅಲೆ ಹುಟ್ಟಿಸಿದೆ.
ಇಂದು ನರಗುಂದ ಬಂದ್: ಜು. 16ರಂದು ಮಹದಾಯಿ ಹೋರಾಟ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ನರಗುಂದ ಬಂದ್ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಬೇರೆ ತಾಲೂಕುಗಳಿಂದ ಪೊಲೀಸರನ್ನು ನಿಯೋಜಿಸಲಾಗಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ