Advertisement

ಚತುಷ್ಪಥ ಅವಾಂತರ; ಗುತ್ತಿಗೆದಾರ ತರಾಟೆಗೆ

02:11 PM Jun 26, 2019 | Team Udayavani |

ಕಲಘಟಗಿ: ಪಟ್ಟಣದಲ್ಲಿ ಆಮೆಗತಿಯ ಚತುಷ್ಪಥ ಕಾಮಗಾರಿಯಿಂದಾಗಿ ಎಪಿಎಂಸಿ ವಹಿವಾಟಿಗೆ ನಷ್ಟ ಉಂಟಾಗುತ್ತಿದೆ. ಮಾರುಕಟ್ಟೆ ಪ್ರವೇಶಿಸುವ ಇಕ್ಕೆಲಗಳ ರಸ್ತೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಮಾಡಿ ಮುಗಿಸುವಂತೆ ಗುತ್ತಿಗೆದಾರ ಬಸವರಾಜ ಅವರಿಗೆ ಶಾಸಕ ಸಿ.ಎಂ. ನಿಂಬಣ್ಣವರ ಸೂಚಿಸಿದರು.

Advertisement

ಪಪಂ ವ್ಯಾಪ್ತಿಯಲ್ಲಿ ಚತುಷ್ಪಥ ಕಾಮಗಾರಿ ನಿಧಾನವಾಗಿದೆ ಹಾಗೂ ಅವೈಜ್ಞಾನಿಕವಾಗಿದೆ ಎಂಬ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.

ಅಹವಾಲು ತೋಡಿಕೊಂಡ ಜನರು: ರಸ್ತೆ ಕಾಮಗಾರಿಯಿಂದಾಗಿ ಎಪಿಎಂಸಿ ಆವರಣ ಗೋಡೆಯನ್ನೂ ಹಾಳು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಪ್ರಾಂಗಣದ ಎರಡೂ ಮುಖ್ಯರಸ್ತೆ ಅಭಿವೃದ್ಧಿ ಪಡಿಸದೇ ವಾಹನ ಸಂಚಾರಕ್ಕೆ ಅನಾನುಕೂಲ ಉಂಟು ಮಾಡಲಾಗಿದೆ. ಇದರಿಂದಾಗಿ ಪ್ರಾಂಗಣದಲ್ಲಿ ಬಹುತೇಕ ವಹಿವಾಟುಗಳು ಸ್ಥಗಿತಗೊಂಡಂತಾಗಿದೆ. ವಾರದ ಸಂತೆಯ ಮಂಗಳವಾರವಂತೂ ರೈತರ ಸಮಸ್ಯೆ ಹೇಳತೀರದಾಗಿದೆ.

ದೊಡ್ಡ ವಾಹನಗಳ ಸಂಚಾರ ಸಮಸ್ಯೆ ಅರಿವಿದ್ದರೂ ಗುತ್ತಿಗೆದಾರರು ಬೇಕಾಬಿಟ್ಟಿ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದಾರೆ. ಇಷ್ಟೆಲ್ಲ ಅವಾಂತರಗಳಿದ್ದರೂ ಗುತ್ತಿಗೆದಾರರಾಗಲಿ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಎನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದಾದ್ಯಂತ ಕಾಮಗಾರಿಯುದ್ದಕ್ಕೂ ಅನಾಥಪ್ರಜ್ಞೆ ಕಾಡುತ್ತಿದೆ ಎಂದು ಸ್ಥಳದಲ್ಲಿದ್ದ ಹಲವರು ಆರೋಪಗಳ ಸುರಿಮಳೆ ಮಾಡಿದರು.

ಅಹವಾಲು ಆಲಿಸಿದ ಶಾಸಕ ನಿಂಬಣ್ಣವರ ಪ್ರತಿಕ್ರಿಯಿಸಿ, ಕಾಮಗಾರಿ ಆರಂಭಗೊಂಡು ವರ್ಷಗಳೇ ಗತಿಸಿವೆ. ಇದುವರೆಗೂ ಸಾರ್ವಜನಿಕರಿಗೆ ತೊಂದರೆ ತಪ್ಪಿಲ್ಲ ಎಂದಾದಲ್ಲಿ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ತಕ್ಷಣ ಎಪಿಎಂಸಿ ಆವರಣಕ್ಕೆ ಬಂದು ಹೋಗುವ ರಸ್ತೆಯನ್ನು ವೈಜ್ಞಾನಿಕವಾಗಿ ಗುಣಮಟ್ಟದಿಂದ ನಿರ್ಮಿಸಿ ರೈತ ವರ್ಗದ ಹಿತ ಕಾಪಾಡಬೇಕು. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಗುಣಮಟ್ಟದಿಂದ ಮಾಡಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.

Advertisement

ಎಪಿಎಂಸಿ ಆವರಣದಲ್ಲಿ ಬಂದು ಹೋಗಲು ಹಾಗೂ ವಾಹನಗಳ ಸಂಚಾರಕ್ಕೆ ಸಹಾಯಕವಾಗುವಂತೆ ತಕ್ಷಣ ಮೊಹರಂ ಮಣ್ಣನ್ನು ಹಾಕಿ ಸುಗಮ ಮಾಡಿಕೊಡಲಾಗುವುದು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲತೆ ಆಗದಂತೆ ಕಾಮಗಾರಿಯುದ್ದಕ್ಕೂ ಕ್ರಮ ಜರುಗಿಸುವುದಾಗಿ ಗುತ್ತಿಗೆದಾರ ಬಸವರಾಜ ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ರಜನಿಕಾಂತ ಬಿಜವಾಡ, ಮಾರುತಿ ಹಂಚಿನಮನಿ, ಕಾಂಗ್ರೆಸ್‌ ತಾಲೂಕಾಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಬಾಬು ಅಂಚಟಗೇರಿ ಸೇರಿದಂತೆ ಎಪಿಎಂಸಿ ಸದಸ್ಯರು, ಅಧಿಕಾರಿಗಳು, ಪಪಂ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ವ್ಯಾಪಾರಸ್ಥರು, ರೈತ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next