ಮೊಳಕಾಲ್ಮೂರು: ತಾಲೂಕಿನ ಕೆಳಗಳಹಟ್ಟಿ- ಬೊಮ್ಮಲಿಂಗನಹಳ್ಳಿ ರಸ್ತೆ ವ್ಯಾಪ್ತಿಯ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ನಿಧಿ ಹುಡುಕುತ್ತಿದ್ದ ನಿಧಿಗಳ್ಳರನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿ ಅವರಿಂದ 6 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಳಗಳಹಟ್ಟಿ- ಬೊಮ್ಮಲಿಂಗನಹಳ್ಳಿ ವ್ಯಾಪ್ತಿ ಪ್ರದೇಶದಲ್ಲಿ ಅಪರಿಚಿತರು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿರುವ ಬಗ್ಗೆ ಸ್ಥಳೀಯರು ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದರು. ಖಚಿತ ಮಾಹಿತಿ ಆಧಾರದ ಮೇರೆಗೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ನೇತೃತ್ವದಲ್ಲಿ ಪಿಎಸ್‌ಐ ಪಾಂಡುರಂಗ ಮತ್ತು ಸಿಬ್ಬಂದಿಗಳು ಸೋಮವಾರ ಮಧ್ಯಾಹ್ನ ದಾಳಿ ನಡೆಸಿ ನಿಧಿಗಳರನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಟೌನ್‌ನ ವಿನಾಯಕ ವಾಟರ್ ಪ್ಲಾಂಟ್ ಮಾಲೀಕ ಶ್ರೀನಿವಾಸಲು, ಹೈದರಾಬಾದ್ ಬಾಪುನಗರ್ ಚಿಕ್ಕಡಪಲ್ಲಿಯ ರಾಜಸಂಗಮೇಶ್ವರ ಶರ್ಮ, ಹೈದರಾಬಾದ್‌ನ ವೆಂಕಟಗಿರಿ, ಯೂಸೂಫ್ ಗುಡ, ಜೂಬ್ಲಿಹಿಲ್ಸ್ ನ ಬಹದ್ದೂರ್ ಧನ್, ಕರ್ನೂಲ್ ಟೌನ್ ಅಮ್ಮ ಆಸ್ಪತ್ರೆಯ ಹತ್ತಿರದ ಮೀನಪ್ಪ ಬಂಧಿತ ಆರೋಪಿಗಳು. ಈ ನಾಲ್ಕು ಜನರು ಕಾರಿನಲ್ಲಿ ಬಂದು ಭೂಮಿಯೊಳಗೆ ದೊರೆಯಬಹುದಾದ ಪುರಾತನ ನಿಧಿ, ಶಾಸನ, ವಿಗ್ರಹಗಳನ್ನು ಕಳುವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಕಳ್ಳತನ ಮಾಡಲು ಪ್ರಯತ್ನಿಸುತ್ತಿದೇವೆಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳಿಂದ 4 ಲಕ್ಷ ರೂ. ಬೆಲೆಯ ಒಂದು ನಿಸ್ಸಾನ್ ಕಾರು, 20 ಸಾವಿರ ರೂ.ಬೆಲೆಯ 6 ಗ್ರಾಂ ತೂಕದ ಬಂಗಾರದ 2 ಓಲೆಗಳು, 2 ಗ್ರಾಂ ತೂಕದ 10 ಸಾವಿರ ರೂ. ಬೆಲೆಯ ಬಂಗಾರದ ಬಿಸ್ಕತ್ತುಗಳು, 8 ಗ್ರಾಂ ತೂಕದ 500 ರೂ. ಬೆಲೆ ಬಾಳುವ ಬೆಳ್ಳಿಯ ಬಿಸ್ಕತ್ತು, 1.5 ಗ್ರಾಂ ತೂಕದ 100 ರೂ ಬೆಲೆಯ ಬೆಳ್ಳಿಯ ಚೂರುಗಳು, ನಿಧಿಯನ್ನು ಶೋಧಿಸುವ ಒಂದು ಲಕ್ಷ ರೂ.ಮೌಲ್ಯದ ಎಲೆಕ್ಟ್ರಾನ್ ಉಪಕರಣ, 70 ಸಾವಿರ ರೂ. ಬೆಲೆಯ ಡೈಮಂಡ್ ಡಿಟೆಕ್ಟರ್, 200 ರೂ. ಬೆಲೆ ಬಾಳುವ ಹೆಡ್‌ಲೈಟ್‌ಗಳು, ಒಂದು ಸಾವಿರ ರೂ. ಮೌಲ್ಯದ ಸೋಲಾರ್‌ಲೈಟ್‌ಗಳು, 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಸೇರಿದಂತೆ ಒಟ್ಟು 6,21,900 ರೂ. ಮೌಲ್ಯದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಎನ್. ಸತೀಶ್, ಪಿಎಸ್‌ಐ ಜಿ.ಪಾಂಡುರಂಗ, ಎಎಸ್‌ಐ ತಿಮ್ಮಣ್ಣ, ಸಿಬ್ಬಂದಿಗಳಾದ ಆರ್. ರಮೇಶ್, ಇ.ಎಂ. ಬಾಷಾ, ಎಚ್.ಪಿ. ಶಿವಕುಮಾರ್ ನಾಯ್ಕ, ವಿ. ವೀರಣ್ಣ, ಭೀಮಣ್ಣ, ಲಕ್ಷ್ಮೀಪತಿ ಭಾಗವಹಿಸಿದ್ದರು.