Advertisement

ನಾಲ್ಕು ಪಟ್ಟು ಅಧಿಕ ಅಕ್ರಮ: ಈ ಬಾರಿಯ ಅಕ್ರಮ ಮೌಲ್ಯ 379 ಕೋ. ರೂ.

01:15 AM May 10, 2023 | Team Udayavani |

ಬೆಂಗಳೂರು: ಮತದಾರರಿಗೆ ಆಮಿಷ ಒಡ್ಡುವ ಚುನಾವಣ ಅಕ್ರಮದಲ್ಲಿ ಕರ್ನಾಟಕ ದಾಖಲೆ ಬರೆದಿದೆ. ರಾಜ್ಯದಲ್ಲಿ ಈವರೆಗಿನ ಚುನಾವಣ ಅಕ್ರಮ ಜಪ್ತಿ ಮೌಲ್ಯ 379 ಕೋಟಿ ರೂ. ಆಗಿದ್ದು, ಇದು ಹಿಂದಿನ ಚುನಾವಣೆಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು.

Advertisement

ಉತ್ತರ ಪ್ರದೇಶದ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಜಪ್ತಿ ಅಂದಾಜು 300 ಕೋಟಿ ರೂ. ಹಾಗೂ ಗುಜರಾತಿನಲ್ಲಿ ಅಂದಾಜು 290 ಕೋಟಿ ರೂ. ಆಗಿತ್ತು. ಪ್ರಸ್ತುತ ರಾಜ್ಯದ ಚುನಾವಣ ಅಕ್ರಮ ಅವೆರಡನ್ನೂ ಹಿಂದಿಕ್ಕಿದೆ.

ಚುನಾವಣೆ ಘೋಷಣೆಯಾದ ಮಾ. 29ರಿಂದ ಮೇ 9ರ ವರೆಗೆ ಅಕ್ರಮದ ಒಟ್ಟು ಮೌಲ್ಯ 379.36 ಕೋಟಿ ರೂ. ಆಗಿದೆ. ಚುನಾವಣ ಆಯೋಗ ಸಿದ್ಧತೆಗಳನ್ನು ಪರಿಶೀಲಿಸಿದ್ದ ಮಾ. 9ರಿಂದ ಮಾ.27ರ ವರೆಗಿನ ಅವಧಿಯಲ್ಲಿ ಜಪ್ತಿ 58 ಕೋಟಿ ರೂ. ಆಗಿತ್ತು. ಇದನ್ನು ಸೇರಿಸಿದರೆ ರಾಜ್ಯದಲ್ಲಿನ ಒಟ್ಟು ಜಪ್ತಿ 400 ಕೋಟಿ ರೂ. ದಾಟುತ್ತದೆ. ಪಂಜಾಬ್‌ ರಾಜ್ಯದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಜಪ್ತಿ ಪ್ರಮಾಣ 500 ಕೋಟಿ ರೂ. ಆಗಿತ್ತು.

ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಜಪ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ. ವಿಶೇಷವೆಂದರೆ ರಾಜ್ಯದಲ್ಲಿ ನಡೆದ ಕಳೆದ ನಾಲ್ಕು ಚುನಾವಣೆಗಳ ಸಂದರ್ಭದಲ್ಲಿ ಆದ ಒಟ್ಟು ಜಪ್ತಿಗಿಂತ ಹೆಚ್ಚು ಜಪ್ತಿ ಈ ಬಾರಿ ಆಗಿದೆ. ಚುನಾವಣ ಅಕ್ರಮದಲ್ಲಿ ಬೆಂಗಳೂರು ನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಒಟ್ಟು ಜಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯದ್ದು ಸಿಂಹಪಾಲು ಇದ್ದು, ನೂರು ಕೋಟಿ ರೂ. ದಾಟಿದೆ.

ಆಯೋಗಕ್ಕೆ ಆತಂಕವಿತ್ತು
ಕರ್ನಾಟಕದಲ್ಲಿ “ಹಣ ಬಲ’ ನಮಗೆ ದೊಡ್ಡ ಸವಾಲು ಎಂದು ಆರಂಭದಲ್ಲೇ ಕೇಂದ್ರ ಚುನಾವಣ ಆಯೋಗ ಆತಂಕ ವ್ಯಕ್ತಪಡಿಸಿತ್ತು. ಅದು ನಿಜವಾಗಿದೆ. ಕಳೆದ ವಿಧಾನಸಭೆ ಚುನಾವಣೆಯ ಆರಂಭದಿಂದ ಕೊನೆಯವರೆಗೆ ಒಟ್ಟು ಚುನಾವಣ ಅಕ್ರಮ ಜಪ್ತಿ 185.74 ಕೋಟಿ ರೂ. ಆಗಿತ್ತು. ಈಗ ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ (ಮೇ 9) ಚುನಾವಣ ಅಕ್ರಮದ ಜಪ್ತಿ 379 ಕೋಟಿ ರೂ. ಆಗಿದೆ. ಆರಂಭದಿಂದ ಇಲ್ಲಿತನಕ ಪ್ರತೀ ದಿನದ ಸರಾಸರಿ ಜಪ್ತಿ 9ರಿಂದ 10 ಕೋಟಿ ರೂ. ಆಗಿದೆ. ಈವರೆಗಿನ ಒಟ್ಟು ಜಪ್ತಿಯಲ್ಲಿ ನಗದು 150 ಕೋಟಿ ಇದೆ.

Advertisement

81 ವೆಚ್ಚ ಸೂಕ್ಷ್ಮ ಕ್ಷೇತ್ರಗಳು
ಚುನಾವಣ ಆಯೋಗದ ಕಠಿನ ಕ್ರಮಗಳಿಂದ ಚುನಾವಣ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಇದರಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ಯಾವುದೇ ಆಮಿಷಗಳು ಮತ್ತು ಅಕ್ರಮಗಳಿಗೆ ಅವಕಾಶ ನೀಡದಂತೆ ಚುನಾವಣೆ ನಡೆಸಬೇಕು ಎಂಬುದು ಆಯೋಗದ ದಿಟ್ಟ ನಿರ್ಧಾರವಾಗಿದೆ. ಅದಕ್ಕಾಗಿ ರಾಜ್ಯದಲ್ಲಿ 81 ಕ್ಷೇತ್ರಗಳನ್ನು “ವೆಚ್ಚ ಸೂಕ್ಷ್ಮ’ ಕ್ಷೇತ್ರಗಳೆಂದು ಗುರುತಿಸಲಾಗಿದೆ. 146 ಮಂದಿ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಚುನಾವಣ ಆಯೋಗ ಹೇಳಿದೆ.

ನಾಲ್ಕು ಚುನಾವಣೆ ಹಿಂದಿಕ್ಕಿದ ಜಪ್ತಿ
ಈ ಬಾರಿಯ ಚುನಾವಣ ಅಕ್ರಮ ಜಪ್ತಿ ಕಳೆದೆರಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಜಪ್ತಿಯನ್ನು ಮೀರಿಸಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ 14.42 ಕೋಟಿ ರೂ., 2014 ಲೋಕಸಭೆ ಚುನಾವಣೆಯಲ್ಲಿ 28.08 ಕೋಟಿ ರೂ., 2018ರ ವಿಧಾನಸಭೆ ಚುನಾವಣೆಯಲ್ಲಿ 185.74 ಕೋಟಿ ರೂ., 2019 ಲೋಕಸಭೆ ಚುನಾವಣೆಯಲ್ಲಿ 88.27 ಕೋಟಿ ರೂ. ಸೇರಿ ಒಟ್ಟು 316 ಕೋಟಿ ರೂ. ಅಕ್ರಮ ಜಪ್ತಿ ಆಗಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಈವರೆಗೆ 379 ಕೋಟಿ ರೂ. ಆಗಿದೆ.

ಜೆಡಿಎಸ್‌ ಅಭ್ಯರ್ಥಿ ಪತ್ನಿ, ಸೊಸೆ ವಶಕ್ಕೆ
ಹಿರಿಯೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರ ಪತ್ನಿ ಜಿ.ಪಿ. ಲತಾ ಹಾಗೂ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅ ಧಿಕಾರಿಗಳು ಮಂಗಳವಾರ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಎ. 21, 22ರಂದು ದಾಳಿ ವೇಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಕರಾವಳಿಯಲ್ಲೆಷ್ಟು?
ಉಡುಪಿ ಜಿಲ್ಲೆಯಲ್ಲಿ ಮಾ.29ರಿಂದ ಮೇ 6ರ ವರೆಗೆ ಒಟ್ಟು 1,60,75,794 ರೂ. ಮೌಲ್ಯದ 42,313.11 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ. ಸೂಕ್ತ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 2,14,91,030 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮೊತ್ತದಲ್ಲಿ ಸೂಕ್ತ ದಾಖಲೆ ಒದಗಿಸಿದ್ದರಿಂದ 82,19,930 ರೂ.ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಒಟ್ಟು 22 ಪ್ರಕರಣಗಳು ದಾಖಲಾಗಿವೆ. ದ.ಕ ಜಿಲ್ಲೆಯಲ್ಲಿ ಎ. 26ರಿಂದ ಮೇ 7ರವರೆಗೆ ಒಟ್ಟು 797 ದಾಳಿ ನಡೆಸಲಾಗಿದ್ದು, 17 ಗಂಭೀರ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next