Advertisement

ನಾಲ್ಕು ಬಾರಿ ಖರ್ಗೆ ಕೈ ತಪ್ಪಿದ ಸಿಎಂ ಸ್ಥಾನ: ಅಮಿನ್‌ಮಟ್ಟು

11:53 AM Mar 29, 2019 | pallavi |

ಕಲಬುರಗಿ: ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿದೆ. ಇದಕ್ಕೆ ಖರ್ಗೆ ಅವರು ಹೈಕಮಾಂಡ್‌ಗೆ ಸಂಪೂರ್ಣವಾಗಿ ತಲೆ ಬಾಗಿದ್ದು ಮತ್ತು ಅತಿಯಾದ ಪಕ್ಷ ನಿಷ್ಠೆಯೇ ಕಾರಣವೆಂದು ಹಿರಿಯ ಪತ್ರಕರ್ತ ದಿನೇಶ ಅಮಿನ್‌ಮಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಂಭಾಗಣದಲ್ಲಿ ಗುರುವಾರ ಸುಮೇಧ ಪ್ರಕಾಶನ ಪ್ರಕಟಿಸಿದ “ನೆಮ್ಮದಿ ಹಾದಿ ನಿರ್ಮಿಸಿದ ನೇತಾರ ಡಾ| ಮಲ್ಲಿಕಾರ್ಜುನ ಖರ್ಗೆ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಸಬುದಾರ ರಾಜಕಾರಣಿಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಮುಖರು. ಆದರೆ, ಅತಿಯಾದ ಪಕ್ಷ ನಿಷ್ಠೆಯೇ ಅವರನ್ನು ರಾಜಕಾರಣದಲ್ಲಿ ಹಿಂದಕ್ಕೆ ತಳ್ಳಿತು. ಮೊದಲ ಬಾರಿಗೆ 1992ರಲ್ಲಿ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿ, ಲಕೋಟೆ ಮೂಲಕ ವೀರಪ್ಪ ಮೋಯ್ಲಿ ಪಾಲಾಯಿತು. ನಂತರದಲ್ಲಿ ಎಸ್‌. ಎಂ. ಕೃಷ್ಣ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನ ತಪ್ಪಿತು.

2004ರಲ್ಲಿ ದಿ.ಧರ್ಮಸಿಂಗ್‌ ಮತ್ತು ಖರ್ಗೆ ಇಬ್ಬರೂ ಆಕಾಂಕ್ಷಿಗಳಾಗಿದ್ದರು. ಕೊನೆಗೆ ಧರ್ಮಸಿಂಗ್‌ ಮುಖ್ಯಮಂತ್ರಿಯಾದರು. 2013ರಲ್ಲೂ ಖರ್ಗೆ ಹೆಸರು ಚಾಲ್ತಿಯಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನ ತಪ್ಪಿತು. ಖರ್ಗೆ ತಮ್ಮ ಶಕ್ತಿ ಬಳಸಿದ್ದರೆ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಬಹುದಿತ್ತು ಎಂದು ಹೇಳಿದರು.

ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಕೋರಿದ್ದೆ ಎಂದು ದೇವೇಗೌಡರು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಆದರೆ, ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದ್ದರೆ ಅವರು ತಿರುಗಿ ಬೀಳುವ ಆತಂಕ ಕೂಡ ದೇವೇಗೌಡರಲ್ಲಿ ಇಲ್ಲದೇ ಇರಲು ಸಾಧ್ಯವಿಲ್ಲ. ದೇವೇಗೌಡರ ಹೇಳಿಕೆಗೆ ಚುನಾವಣೆ ನಂತರ ಉತ್ತರ ಕೊಡುವುದಾಗಿ ಖರ್ಗೆ ಹೇಳಿದ್ದು, ಇದನ್ನು ಕಾದು ನೋಡಬೇಕಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಸಮರ್ಥ ಜನನಾಯಕರು. ಗೆಲ್ಲಿಸುವ ಮತ್ತು ಸೋಲಿಸುವ ರಾಜಕಾರಣಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ, ಖರ್ಗೆ ತಮಗೆ ಪೂರಕವಾಗಿ ಕೆಲಸ ಮಾಡಿಲ್ಲ ಎಂದು ಯಾರನ್ನೂ ಸೋಲಿಸಲು ಹೋಗಿಲ್ಲ. ಮತ್ತೂಬ್ಬರನ್ನು ಸೋಲಿಸಲು ಹೋಗಿ ಬಿದ್ದ ರಾಜಕಾರಣಿಗಳು ಇದ್ದಾರೆ ಎಂದರು.

Advertisement

ಈ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಖರ್ಗೆ ವಿಕಾಸ ಪುರುಷರಾಗಿದ್ದಾರೆ. ಸಂಸತ್‌ನಲ್ಲಿ ವಿರೋಧ ಪಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 282 ಸದಸ್ಯರನ್ನು ಹೊಂದಿದ ಆಡಳಿತ ಪಕ್ಷದ ವಿರುದ್ಧ ಗಟ್ಟಿ ದನಿ ಎತ್ತಿದ್ದಾರೆ. ಇಷ್ಟು ವರ್ಷ ರಾಜಕಾರಣ ಮಾಡಿದರೂ ಇಂದು ಚಿಲ್ಲರೆ, ಪಲ್ಲರೆ ರಾಜಕಾರಣಗಳನ್ನು ಎದುರಿಸಬೇಕಾಗಿದೆ ಎಂದು ಖರ್ಗೆ ಅಂದುಕೊಂಡಿರಲಿಲ್ಲ. ಖರ್ಗೆ ಬದುಕಿರುವರೆಗೂ ಸೋಲು ಕಾಣುವುದಿಲ್ಲ. ಇಂದು ಮಾರ್ಕೇಟಿಂಗ್‌ ಕಾಲ. ಕೇವಲ ಕೆಲಸ ಮಾಡಿದರೆ ಮಾತ್ರ ಸಾಲದು. ಮಾಡಿದ ಕೆಲಸವನ್ನು ಮಾರ್ಕೆಟ್‌ ಮಾಡಬೇಕೆಂದು ಹೇಳಿದರು.

ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಿ.ಆರ್‌.ಪಾಟೀಲ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಬಿ.ಬಿ. ರಾಂಪುರೆ, ಲೇಖಕರಾದ ಶರಣಪ್ಪ ಮನೇಗಾರ, ಸುನೀಲ ಹುಡಗಿ, ಮಾರುತಿ ಗೋಖಲೆ, ಡಾ| ಪ್ರಭು ಖಾನಾಪುರೆ, ಬಿ.ಆರ್‌. ಬುದ್ಧಾ ಹಾಜರಿದ್ದರು.

ರಾಜ್ಯ ರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ ಮತ್ತು ಬಿ.ಎಸ್‌. ಯಡಿಯೂರಪ್ಪ ಜನನಾಯಕರಾಗಿ ಬೆಳೆದವರು. ಯಡಿಯೂರಪ್ಪನವರು ಎಂದೂ ಸಂಘ ಪರಿವಾರದೊಂದಿಗೆ ನಡೆದು ಬಂದವರಲ್ಲ. ಅವರ ಹೋರಾಟದ ಹಾದಿಯೇ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿತ್ತು. ಆದರೆ, ಮುಖ್ಯಮಂತ್ರಿ ಹುದ್ದೆಗೇರಿದ ಬಳಿಕ ಮಠ ಮಾನ್ಯಗಳಿಗೆ ಅನುದಾನ ನೀಡುವ, ಹಣ ಗಳಿಸುವ ಹುಂಬುತನ ಯಾಕೆ ತೋರಿದರೋ ಗೊತ್ತಿಲ್ಲ. ಇದರಿಂದ ಯಡಿಯೂರಪ್ಪನವರು ರಾಜಕಾರಣದಲ್ಲಿ ಎಡವಿದರು.
ದಿನೇಶ ಅಮಿನ್‌ಮಟ್ಟು, ಹಿರಿಯ ಪತ್ರಕರ್ತ

ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಲ….ಕೆ. ಅಡ್ವಾಣಿ ಕಲಬುರಗಿಗೆ ಭೇಟಿ ಕೊಟ್ಟಾಗ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 371ನೇ (ಜೆ) ಕಲಂ ಜಾರಿ ಮಾಡುವಂತೆ ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸದೆ ಅವರು ಅದನ್ನು ದೂರಕ್ಕೆ ದೂಡಿದ್ದರು. ಆದರೆ, ಇದನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಅದನ್ನು ಮಾಡಿ ತೋರಿಸಿದ್ದು ಮಲ್ಲಿಕಾರ್ಜುನ ಖರ್ಗೆಯವರು. 371ನೇ (ಜೆ) ಕಲಂ ಜಾರಿ ಮಾಡುವ ಮೂಲಕ ನೆಮ್ಮದಿಯಾಗಿ ಬದುಕುವ ರಾಜಮಾರ್ಗ ನಿರ್ಮಿಸಿದ ಕೀರ್ತಿ ಖರ್ಗೆ ಅವರಿಗೆ ಸಲ್ಲುತ್ತದೆ. ಖರ್ಗೆ ಹಿಡಿದ ಕೆಲಸವನ್ನು ಮಾಡದೇ ಬಿಡಲ್ಲ. ಅದಕ್ಕೆ ಇಲ್ಲಿಗೆ ಬಂದ ವೈರಿಗಳು ಸಹ ಖರ್ಗೆ ಬಗ್ಗೆ ಚಕಾರ ಎತ್ತದೆ ಹೋಗಿದ್ದಾರೆ.
ಪ್ರೋ| ಆರ್‌.ಕೆ.ಹುಡಗಿ, ಹಿರಿಯ ವಿಚಾರವಾದಿ

Advertisement

Udayavani is now on Telegram. Click here to join our channel and stay updated with the latest news.

Next