Advertisement

ರಾಜ್ಯದಲ್ಲಿ ನಾಲ್ಕು ಸಾವಿರ ಕೆರೆಗಳು ಮಾಯ: ಜಯಚಂದ್ರ

10:24 AM Mar 23, 2017 | Team Udayavani |

ವಿಧಾನಸಭೆ: ರಾಜ್ಯದಲ್ಲಿ 4 ಸಾವಿರ ಕೆರೆಗಳು ಮಾಯವಾಗಿವೆ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳುವ ಕುರಿತ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಆರ್‌ಡಿಪಿಆರ್‌ ಇಲಾಖೆ ವ್ಯಾಪ್ತಿಯಲ್ಲಿ 32 ಸಾವಿರ ಕೆರೆಗಳು ಇವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3677 ಕೆರೆಗಳು ಇವೆ.

Advertisement

ಬಹುತೇಕ ಕೆರೆಗಳು ಖಾಲಿಯಾಗಿವೆ. ಬೇರೆ, ಬೇರೆ ಇಲಾಖೆ ವ್ಯಾಪ್ತಿಯಲ್ಲಿ ಕೆರೆಗಳು ಬರುತ್ತಿರುವುರದಿಂದ ಸರ್ಕಾರಕ್ಕೆ ಸರಿಯಾದ ಲೆಕ್ಕ ಸಿಗುತ್ತಿಲ್ಲ ಎಂದರು. ಈಗಾಗಲೇ ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆ ಒತ್ತುವರಿ ತೆರವು ಕಾರ್ಯ
ನಡೆಯುತ್ತಿದೆ. ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ವ್ಯಾಪ್ತಿಗೆ ತಂದು ಕೆರೆ ಸಂಜೀವಿನಿ ಯೋಜನೆ ಮೂಲಕ ಹೂಳೆತ್ತಲು ಕ್ರಮ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿಗೆ ಪ್ರಸ್ತಾಪನೆ ಕಳುಹಿಸಲಾಗಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಅಂತರ ಜಲಮಟ್ಟ ಹೆಚ್ಚಳಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ
ರಾಜ್ಯದಲ್ಲಿಯೂ ಅಂತರ್‌ಜಲ ಸಂರಕ್ಷಣೆ ಮಾಡಬೇಕಿದೆ. ರಾಜ್ಯದಲ್ಲಿ 43 ತಾಲೂಕುಗಳಲ್ಲಿ ಅಂತರ್‌ ಜಲ ಬಳಕೆ ಮಾಡಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. 147 ತಾಲೂಕುಗಳಲ್ಲಿ ಅಂತರ್‌ ಜಲಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿದೆ.
ಅಂತರಜಲ ಮರುಪೂರಣಗೊಳಿಸಲು ಸರ್ಕಾರ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಕೆರೆಗಳ ಹೂಳೆತ್ತಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಲಕ್ಷ ರೂಪಾಯಿ ನೀಡುತ್ತಿದೆ. ರೈತರು ಸ್ವಯಂಪ್ರೇರಿತರಾಗಿ ಕೆರೆಯ ಮಣ್ಣು ತೆಗೆದುಕೊಂಡು ತಮ್ಮ ಹೊಲಗಳಿಗೆ
ಹಾಕುತ್ತಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಅನುಕೂಲವಾಗಿದೆ. ಈ ಯೋಜನೆಯನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಇದಕ್ಕೂ ಮೊದಲು ಮಾತನಾಡಿದ ಕೆ.ಎಸ್‌.ಪುಟ್ಟಣ್ಣಯ್ಯ, ಕೆರೆ ಹೂಳೆತ್ತುವ ಕಾರ್ಯವನ್ನು ವಿಳಂಬ ಮಾಡಬೇಡಿ. ಈ ನಿಟ್ಟಿನಲ್ಲಿ ಎಲ್ಲ ಶಾಸಕರಿಗೂ ಜವಾಬ್ದಾರಿ ನೀಡಿ. ಒಂದು ತಿಂಗಳಲ್ಲಿ ಎಲ್ಲಾ ಕೆರೆಗಳ ಹೂಳೆತ್ತಬೇಕು ಎಂದು ಮನವಿ ಮಾಡಿದರು.

ಕೆಆರ್‌ಎಸ್‌ ಸುತ್ತ ಅಕ್ರಮ ಗಣಿ: ತನಿಖೆ
ವಿಧಾನಸಭೆ:
ಕೃಷ್ಣರಾಜ ಸಾಗರ ಅಣೆಕಟ್ಟೆಯ ಸುತ್ತ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಅಲ್ಲಿನ ಪಂಚಾಯಿತಿಯಲ್ಲಿ ರಾಯಲ್ಟಿಯನ್ನು ಮನ್ನಾ ಮಾಡಿಕೊಂಡಿರುವ ಪ್ರಕರಣ ಕುರಿತು ಗಣಿ ಇಲಾಖೆಯ ಉನ್ನತಾಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಮೇಲುಕೋಟೆ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ಬಗ್ಗೆ ಸರ್ಕಾರದ ಉನ್ನತಾಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ
ಪುಟ್ಟಣ್ಣಯ್ಯ, ಕೆಆರ್‌ಎಸ್‌ ವ್ಯಾಪ್ತಿಯಲ್ಲಿನ ಹೊನಗಾನಹಳ್ಳಿ ಮತ್ತು ಚಿನಕುರಳಿ ಗ್ರಾಮಗಳಲ್ಲಿ ಸುಮಾರು 200 ರಿಂದ 300 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗಿದ್ದು, ಸರ್ಕಾರಕ್ಕೆ ಸುಮಾರು 200 ಕೋಟಿ ರೂ.ರಾಜಧನ ನಷ್ಟ ಉಂಟು ಮಾಡಲಾಗಿದೆ. ಸರ್ಕಾಕ್ಕೆ ನೀಡಬೇಕಿದ್ದ ರಾಜಧನವನ್ನು ಪಂಚಾಯಿತಿಯವರೇ ಮನ್ನಾ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡೋದಕ್ಕೆ ಹಿಂದೆ ಮುಂದೆ ನೋಡುತ್ತಿದೆ. ಆದರೆ, ಪಂಚಾಯಿತಿಯವರೇ ಸರ್ಕಾರಕ್ಕೆ ಬರುವ ಹಣವನ್ನು ಅವರೇ ಮನ್ನಾ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅವರ ವಿರುದ್ಧ ಸಿಐಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next