Advertisement

ಹಳ್ಳಿಗರಿಗೆ ಚತುಷ್ಪಥ ಶಾಪ

03:40 PM Jun 10, 2019 | Suhan S |

ಕುಮಟಾ: ತಾಲೂಕಿನಲ್ಲಿ ಹಾದು ಹೋಗುವ ರಾ.ಹೆ. 66(17)ರ ಚತುಷ್ಪಥ ಕಾಮಗಾರಿ ತಾಲೂಕಿನ ಕೆಲ ಗ್ರಾಮಗಳಿಗೆ ಶಾಪವಾಗಿ ಪರಿಣಮಿಸಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ತಂಡ್ರಕುಳಿ ಗ್ರಾಮದಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾದರೆ, ಖೈರೆ ಮತ್ತು ದುಂಡಕುಳಿ ಗ್ರಾಮ ಸೇರಿದಂತೆ ಕೆಲಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

Advertisement

ಆಮೆಗತಿಯ ಕಾಮಗಾರಿ: ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡು 4 ವರ್ಷಗಳು ಕಳೆದರೂ ಕೆಲಸ ಮಾತ್ರ ಇನ್ನೂ ಆಮೆಗತಿಯಲ್ಲಯೇ ಸಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 11 ಜೂನ್‌ 2017 ರಂದು ಮೊದಲ ಮಳೆಗೇ ತಂಡ್ರಕುಳಿ ಗ್ರಾಮದ ಮನೆಗಳ ಮೇಲೆ ಗುಡ್ಡ ಕುಸಿದು ಭಾರೀ ಅನಾಹುತವಾಗಿತ್ತು. ಮೂರು ಜೀವಗಳ ಬಲಿಯಾಗಿತ್ತು. ಹಲವರು ಗಾಯಗೊಂಡಿದ್ದರು. ಇನ್ನು ಕೆಲವೆ ಇನ್ನಿತರ ಸಮಸ್ಯೆ ಉದ್ಭವಿಸಿ ಹಲವು ಹೋರಾಟ, ಪ್ರತಿಭಟನೆಗಳು ನಡೆದವು. ಆದರೆ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಸ್ಥಗಿತಗೊಂಡ ಸ್ಥಳಾಂತರ: ಅಘನಾಶಿನಿ ನದಿ ಹಾಗೂ ರಾ.ಹೆ. ಗುಡ್ಡದ ನಡುವಿನ 50 ರಿಂದ 100 ಮೀ. ಅಗಲದಲ್ಲಿ ಜನವಸತಿ ವ್ಯಾಪಿಸಿರುವ ತಂಡ್ರಕುಳಿಯಲ್ಲಿ 52 ಕುಟುಂಬಗಳಿಂದ 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗುಡ್ಡ ಕುಸಿತದ ನಂತರ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿತು. ಮಳೆಗಾಲದ ನಾಲ್ಕು ತಿಂಗಳಿಗೆ ಸೀಮಿತವಾಗಿ ಸ್ಥಳಾಂತರಗೊಳ್ಳುವ ನಿರ್ಣಯದಂತೆ ತಂಡ್ರಕುಳಿ ಜನರಿಗೆ ತಲಾ 10,000 ರೂ ಹಣಸಹಾಯದ ಭರವಸೆ ನೀಡಲಾಗಿತ್ತು. ಆದರೆ ಯಾರಿಗೂ ಮೊದಲ ತಿಂಗಳು ಹಣಸಹಾಯ ಕೊಡದಿರುವುದರಿಂದ ಎಲ್ಲರೂ ಮರಳಿ ಮನೆ ಸೇರಿಕೊಂಡಿದ್ದಾರೆ.

ಅಪಾಯ ಇನ್ನೂ ಇದೆ!: ತಂಡ್ರಕುಳಿಯಲ್ಲಿ ಗುಡ್ಡ ಮತ್ತೆ ಕುಸಿಯದಂತೆ ದರೆಗೆ ಕಬ್ಬಿಣದ ರಾಡ್‌, ಬಲೆ, ಪೈಪುಗಳನ್ನು ಹಾಕಿ ಕಾಂಕ್ರೀಟ್ ಲೇಪನವನ್ನು ಮಾಡಲಾಗಿದೆ. ಇದೇ ರೀತಿ ಖೈರೆ ಗುಡ್ಡಕ್ಕೂ ಮಾಡಲಾಗಿದೆ. ಆದರೆ ಮಳೆಗಾಲಕ್ಕೂ ಮುನ್ನವೇ ಸಿಮೆಂಟ್ ಪ್ಲಾಸ್ಟರ್‌ ಬಿರುಕು ಬಿಟ್ಟಿತ್ತು. ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯವರು ಮತ್ತೆ ಸಿಮೆಂಟ್ ಲೇಪಿಸಿ ಜನರ ಕಣ್ಣಿಗೆ ಬೆಣ್ಣೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಬಂಡೆಗಳನ್ನು ಸ್ಫೊಧೀಟಿಸಿ ಭೂಮಿಯಲ್ಲಿ ಭಾರೀ ಕಂಪನ ಸೃಷ್ಟಿಸುತ್ತಿರುವದರಿಂದ ಮಣ್ಣಿನ ಗುಡ್ಡಕ್ಕೆ ಹಾಕಿದ ಕಾಂಕ್ರಿಟ್ ಈಗಲೇ ಕುಸಿದಿದೆ. ಇನ್ನು ಮಳೆಗಾಲ ದಲ್ಲಿ ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದೆ.

Advertisement

ಜನತೆಗೆ ಶಾಪವಾದ ಕಾಮಗಾರಿ: ತಾಲೂಕಿನಲ್ಲಿ ಹಾದು ಹೋದ ಚತುಷ್ಪಥ ಕಾಮಗಾರಿ ತಂಡ್ರಕುಳಿ, ಖೈರೆ ಹಾಗೂ ದುಂಡಕುಳಿ ಗ್ರಾಮಕ್ಕೆ ಹಲವು ಬಗೆಯ ಸಮಸ್ಯೆಗಳನ್ನು ಕೊಟ್ಟಿದೆ. ಜೀವಜಲ ಪೂರೈಕೆಯ ಪೈಪ್‌ ಮಾರ್ಗಗಳು ಈವರೆಗೂ ಪೂರ್ಣವಾಗಿಲ್ಲ. ಮಳೆಗಾಲದಲ್ಲಿ ಕೆಲವೆಡೆ ನೀರು ನಿಲ್ಲುವ ಸಾಧ್ಯತೆಯಿದೆ. ಬಂಡೆ ಒಡೆಯುವಾಗ ಹಲವು ಬಾರಿ ಮನೆಗಳ ಮೇಲೆ ಕಲ್ಲುಬಿದ್ದು ಹಾನಿ ಆದರೂ ಒಮ್ಮೆಯೂ ಪರಿಹಾರ ಕೊಟ್ಟಿಲ್ಲ.

ಸಭೆಗೆ ಒತ್ತಾಯ: ಸ್ಥಳೀಯವಾಗಿ ಉಂಟಾದ ಹಾನಿ, ಪರಿಹಾರ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇ 23 ರ ಲೋಕಸಭೆ ಚುನಾವಣೆಯ ಮತ ಎಣಿಕೆ ಬಳಿಕ ಉಪವಿಭಾಗಾಧಿಕಾರಿಗಳ ಸಮಕ್ಷಮ ತಂಡ್ರಕುಳಿ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವುದಾಗಿ ತಹಶೀಲ್ದಾರ್‌ ಪಿ.ಕೆ. ದೇಶಪಾಂಡೆ, ಸಿಪಿಐ ಸಂತೋಷ ಶೆಟ್ಟಿ ಜನರಿಗೆ ಭರವಸೆ ಕೊಟ್ಟಿದ್ದರು. ಈಗ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಮಳೆಗಾಲಕ್ಕೆ ಹೆಚ್ಚು ದಿನವಿಲ್ಲ. ಹೀಗಾಗಿ ಕೂಡಲೇ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ತಂಡ್ರಕುಳಿ ಗ್ರಾಮಸ್ಥರು ಕೋರಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ನೋಟಿಸ್‌: ಬಂಡೆ ಸ್ಫೋಟದ ಬಗ್ಗೆ ಐಆರ್‌ಬಿ ಮಾಡರ್ನ್ ರೋಡ್‌ ಮೇಕರ್ಸ್‌ ಕಂಪನಿಗೆ ರಾ.ಹೆ.66 ಸಕ್ಷಮ ಪ್ರಾಧಿಕಾರದ ಆಯುಕ್ತೆ ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ನೋಟಿಸ್‌ ನೀಡಿ ಎಚ್ಚರಿಸಿದ್ದಾರೆ. ಇನ್ನೊಮ್ಮೆ ಇಂತಹ ಘಟನೆ ನಡೆದಲ್ಲಿ ಆ ಕಂಪನಿಯನ್ನೇ ಹೊಣೆಗಾರ ನನ್ನಾಗಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

•ಖೈರೆ, ತಂಡ್ರಕುಳಿ ಗ್ರಾಮಸ್ಥರಿಗೆ ಮುಳುವಾದ ಹೆದ್ದಾರಿ ಅಗಲೀಕರಣ

•ಮನೆಗಳ ಮೇಲೆ ಕಲ್ಲು ಬಿದ್ದು ಹಾನಿಯಾದರೂ ದೊರೆಯದ ಪರಿಹಾರ

ತಂಡ್ರಕುಳಿಯ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಹೆದ್ದಾರಿ ಕಾಮಗಾರಿಯಲ್ಲಿ ಮಳೆಗಾಲದ ಮುಂಜಾಗ್ರತೆಗಾಗಿ ಈಗಾಗಲೇ ಎಲ್ಲೆಡೆ ಕ್ರಮ ಕೈಗೊಳ್ಳಲಾಗಿದೆ. ಗುಡ್ಡ ಕುಸಿತದ ಅಪಾಯ ಗುರುತಿಸಲಾದ ಎಲ್ಲೆಡೆಗಳಲ್ಲಿ ಸೂಕ್ತ ಸುರಕ್ಷತಾ ಕಾಮಗಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಮತ್ತಿತರ ವಿಚಾರಗಳ ಬಗ್ಗೆ ರಾ.ಹೆ. ಪ್ರಾಧಿಕಾರದ ಜೊತೆ ಸಮಾಲೋಚಿಸುತ್ತೇನೆ. • ದಿನಕರ ಶೆಟ್ಟಿ,ಶಾಸಕ, ಕುಮಟಾ-ಹೊನ್ನಾವರ ಮತಕ್ಷೇತ್ರ
Advertisement

Udayavani is now on Telegram. Click here to join our channel and stay updated with the latest news.

Next