Advertisement

ಹೆಸರು ಬೆಳೆಗಾರರಿಗೆ ನಾಲ್ಕುಕ್ವಿಂಟಲ್‌ ಸಂಕಷ್ಟ

03:40 PM Sep 23, 2018 | |

ನರಗುಂದ: ಈ ಹಿಂದೆ ನೀಡಲಾಗಿದ್ದ ಹತ್ತು ಕ್ವಿಂಟಲ್‌ ಹೆಸರು ಕಾಳು ಖರೀದಿಸುವ ಭರವಸೆಗೆ ಈಗ ಕೊಕ್ಕೆ ಬಿದ್ದಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ರೈತರಿಂದ ಕೇವಲ ನಾಲ್ಕು ಕ್ವಿಂಟಲ್‌ ಹೆಸರು ಖರೀದಿಸುವಂತೆ ಸರಕಾರ ಆದೇಶ ಹೊರಡಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ.

Advertisement

ಕ್ವಿಂಟಲ್‌ಗೆ 6975 ರೂ. ದರದಲ್ಲಿ ಪ್ರತಿ ರೈತನಿಂದ 10 ಕ್ವಿಂಟಲ್‌ನಂತೆ ರಾಜ್ಯದಿಂದ 23,250 ಮೆಟ್ರಿಕ್‌ ಟನ್‌ ಹೆಸರು ಕಾಳು ಖರೀದಿಗೆ ಕೇಂದ್ರ ಸರ್ಕಾರ ಆ.30ರಂದು ಅನುಮೋದನೆ ನೀಡಿದ ಬಳಿಕ ಆ.31ರಿಂದಲೇ ರಾಜ್ಯ ಸರ್ಕಾರ ಎಲ್ಲೆಡೆ ಖರೀದಿ ಕೇಂದ್ರ ತೆರೆಯಿತು. ಆದರೆ ವಾರಗಟ್ಟಲೇ ಮೊಬೈಲ್‌ ಆ್ಯಪ್‌ ಬಾರದೇ ನೋಂದಣಿಯೂ ವಿಳಂಬವಾಯಿತು. ಸೆ.7ಕ್ಕೆ ಮತ್ತೂಂದು ಆದೇಶದಲ್ಲಿ ರಾಜ್ಯ ಸರ್ಕಾರ 30 ದಿನದ ಪ್ರಕ್ರಿಯೆಯಲ್ಲಿ ನೋಂದಣಿಗೆ 10 ದಿನ ಹೆಚ್ಚಳ ಮಾಡಿತು. ಸೆ.16ಕ್ಕೆ ನೋಂದಣಿ ಮುಗಿದು ವಾರ ಗತಿಸಿದರೂ ಖರೀದಿ ಪ್ರಕ್ರಿಯೆ ಮಾತ್ರ ಇನ್ನೂ ಆರಂಭವಾಗಿಲ್ಲ.

ಇನ್ನು ಗದಗ ಜಿಲ್ಲೆಗೆ ರಾಜ್ಯ ಸರ್ಕಾರ ಕೇವಲ 4,883 ಟನ್‌ ಖರೀದಿಗೆ ಗುರಿ ನೀಡಿದೆ. ತಾಲೂಕಿನಲ್ಲೇ ಏಳು ಕೇಂದ್ರಗಳಿಂದ 6 ಸಾವಿರಕ್ಕೂ ಮೇಲ್ಪಟ್ಟು ರೈತರು ನೋಂದಣಿ ಮಾಡಿಸಿದ್ದರಿಂದ ಜಿಲ್ಲೆಯ ಗುರಿ ನರಗುಂದಕ್ಕೇ ಸಾಕಾಗುವುದಿಲ್ಲ.

ಆದೇಶದ ಗೊಂದಲದಿಂದ ಎಲ್ಲಿ ಬೆಳೆದ ಧಾನ್ಯವನ್ನೂ ಕಳೆದುಕೊಳ್ಳುತ್ತೇವೋ ಎಂಬ ಆತಂಕ ರೈತರಲ್ಲಿದೆ. ಸಾಲದೆಂಬಂತೆ ಖರೀದಿ ಪ್ರಮಾಣ ಕಡಿತದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ 5400 ಇದ್ದ ಹೆಸರು ಕಾಳಿನ ಬೆಲೆಯೂ 4800ಕ್ಕೆ ಕುಸಿರುವುದು ರೈತನ್ನು ಕಂಗಾಲು ಮಾಡಿದೆ. ಕೇಂದ್ರ ಸರಕಾರ ಅನುಮೋದನೆ ನೀಡಿದ್ದರೂ ಇತ್ತ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುವಲ್ಲಿ ರಾಜ್ಯ ಸರ್ಕಾರದ ಗೊಂದಲದ ನೀತಿ ರೈತರಲ್ಲಿ ಆತಂಕ ಸೃಷ್ಟಿಸುತ್ತಿದೆ. ಖರೀದಿ ಕೇಂದ್ರ ಯಾವಾಗ ಪ್ರಾರಂಭಿಸುತ್ತಾರೋ ಎಂಬ ರೈತರ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

ನಾಲ್ಕು ಕ್ವಿಂಟಲ್‌ ಸಾಕಾಗಲ್ಲ
ಇನ್ನೊಂದು ಸಂಗತಿ ಎಂದರೆ ಸರ್ಕಾರದ ನಿಗದಿಯಂತೆ ನಾಲ್ಕು ಕ್ವಿಂಟಲ್‌ ಪ್ರಮಾಣವೂ ತಾಲೂಕಿಗೆ ಸಾಕಾಗದು. ತಾಲೂಕಿನಲ್ಲಿ 6454 ರೈತರು ನೋಂದಣಿ ಮಾಡಿಸಿದ್ದಾರೆ. 64, 540 ಕ್ವಿಂಟಲ್‌ ಬೇಡಿಕೆಯಿದೆ. ಆದರೆ ತಾಲೂಕಿಗೆ ಇರುವ ಗುರಿ 9,700 ಕ್ವಿಂಟಲ್‌ ಮಾತ್ರ.

Advertisement

ಸರ್ಕಾರ ಆದೇಶಕ್ಕೆ ಕಾಯುತ್ತಿದ್ದೇವೆ
ಪ್ರತಿ ರೈತರಿಂದ ಸರ್ಕಾರ 4 ಕ್ವಿಂಟಲ್‌ ಖರೀದಿಗೆ ಆದೇಶ ನೀಡಿದೆ. ರೈತರು 10 ಕ್ವಿಂಟಲ್‌ ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅವರು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಸರ್ಕಾರದ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇವೆ.
ಪ್ರಕಾಶ ಹೊಳೆಪ್ಪಗೋಳ,
ತಹಶೀಲ್ದಾರ್‌, ನರಗುಂದ 

ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next