Advertisement
ಲಿಂಗರಾಜಪುರದ ಅಯ್ಯಪ್ಪ ಅಲಿಯಾಸ್ ನಿತೀಶ್ ಕುಮಾರ್, ಚಿಕ್ಕಬಾಣಸವಾಡಿಯ ಲೆನೋ ಅಲಿಯಾಸ್ ಲೆನಿನ್ ಪ್ಯಾಟ್ರಿಕ್, ಸುದೇಶ್ ಅಲಿಯಾಸ್ ಸುದಿ ಹಾಗೂ ಸೋಮಶೇಖರ್ ಅಲಿಯಾಸ್ ಚಿನ್ನಿ ಬಂಧಿತರು. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ಜೇಮ್ಸ್ ಹಾಗೂ ಪಪ್ಪಿ ಪತ್ತೆಗೆ ಪೂರ್ವ ವಿಭಾಗದ ಪೊಲೀಸರುಕಾರ್ಯಾಚರಣೆ ಮುಂದುವರಿಸಿದ್ದಾರೆ.
Related Articles
Advertisement
ಪ್ರತಿ ದಿನ ಸುಲ್ತಾನ್ ಅಂಗಡಿಗೆ ದಿನಸಿ ಪೂರೈಕೆಗೆ ಬಂದಾಗ ಅಯ್ಯಪ್ಪ ಮತ್ತು ಸುದೇಶ್ ಯುವತಿಯೊಬ್ಬಳನ್ನುನೋಡಿದ್ದರು. ನಾಲ್ಕೈದು ದಿನಗಳಿಂದಲೂ ಆಕೆಯ ಚಲವಲನದ ಮೇಲೆ ನಿಗಾವಹಿಸಿದ್ದ ಅವರು, ಶನಿವಾರ ಹೊಸ ವರ್ಷಾಚರಣೆ ಮತ್ತಿನಲ್ಲಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರು ಮಂದಿ ಆರೋಪಿಗಳು ಡಿ.31ರಂದು ಕಮ್ಮನಹಳ್ಳಿ ಹತ್ತಿರದ ಡಾ.ರಾಜ್‌ಕುಮಾರ್ ಪಾರ್ಕ್ ಬಳಿ ಸೇರಿದ್ದಾರೆ.
ಅಲ್ಲಿ ತಡ ರಾತ್ರಿವರೆಗೆ ಕಂಠಪೂರ್ತಿ ಮದ್ಯ ಸೇವಿಸಿದ ಅವರು, 12 ಗಂಟೆ ನಂತರ ಆ ಪ್ರದೇಶದಲ್ಲಿ ಬೈಕ್‌ಗಳಲ್ಲಿ
ಜೋರಾಗಿ ಕೂಗುತ್ತಾ ಪುಂಡಾಟಿಕೆ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ತಮಗೆ ಎದುರಾದವರಿಗೆ
ಹೊಸ ವರ್ಷದ ಶುಭ ಕೋರಿ ದುಂಡಾವರ್ತನೆ ಮಾಡಿದ್ದರು. ಕೆಲ ಹೊತ್ತು ಬೈಕ್‌ನಲ್ಲಿ ಸುತ್ತಾಡಿದ ಅವರು ರಾತ್ರಿ 2.30ರ ವೇಳೆಗೆ ಆಟೋದಲ್ಲಿ ಯುವತಿ ಬರುತ್ತಿರುವುದನ್ನು ಗಮನಿಸಿ ಅವರ ಬೆನ್ನು ಹತ್ತಿದ್ದಾರೆ. ಕುಳ್ಳಪ್ಪ ಸರ್ಕಲ್ ಬಳಿ ಯುವತಿಯರಿಬ್ಬರು ಬಂದು ಆಟೋ ಇಳಿಯುತ್ತಿದ್ದಂತೆ ಮೊದಲು ಸೋಮಶೇಖರ್ ಎಂಬಾತ ಬೈಕ್‌ನಲ್ಲಿ ಬಂದಿದ್ದಾನೆ. ಆದರೆ, ಇಬ್ಬರು ಇದ್ದುದನ್ನು ಕಂಡು ಅಲ್ಲಿಂದ ಸ್ವಲ್ಪ ದೂರ ಹೋಗಿ ನಿಂತಿದ್ದಾನೆ. ಆಟೋದಿಂದ ಇಳಿದ ಸಂತ್ರಸ್ತ ಯುವತಿಯ ಸಹೋದರಿ ಮೊದಲು ಮನೆಯತ್ತ ಹೆಜ್ಜೆ ಹಾಕಿದ್ದಳು. ನಂತರ ಸಂತ್ರಸ್ತ ಯುವತಿ ನಿಧಾನವಾಗಿ ಮನೆ ಕಡೆ ಹೋಗುತ್ತಿದ್ದುದನ್ನು ಗಮನಿಸಿದ ಅಯ್ಯಪ್ಪ ಹಾಗೂ ಲೆನೋ
ಯುವತಿಯ ಮನೆ ಕಡೆ ಬೈಕ್ ಚಲಾಯಿಸಿದ್ದಾರೆ. ಆ ವೇಳೆ ಸುದೇಶ್ ಮತ್ತೂಂದು ಬೈಕ್‌ನಲ್ಲಿ ಬಂದು ಮುಖ್ಯರಸ್ತೆಯಲ್ಲಿ
ನಿಂತು, ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಚುಡಾಯಿಸಿದ್ದ. ಇದರಿಂದ ಗಾಬರಿಗೊಂಡು ಮನೆಗೆ ಬಿರುಸಾಗಿ ಹೆಜ್ಜೆ ಹಾಕಲು ಯುವತಿ ಮುಂದಾದಾಗ ಮೊದಲೇ ಬೈಕ್‌ನಲ್ಲಿ ಹೋಗಿ ನಿಂತಿದ್ದ ಅಯ್ಯಪ್ಪ ಕೆಳಗಿಳಿದು ಬಂದು ಆಕೆಯನ್ನು ಅಪ್ಪಿಕೊಂಡು ಮುತ್ತಿಟ್ಟು ಹೊಸ ವರ್ಷದ ಶುಭ ಕೋರಿದ್ದಾನೆ. ಇದರಿಂದ ಆತಂಕಗೊಂಡು ಪ್ರತಿರೋಧ ವ್ಯಕ್ತಪಡಿಸಿದ ಆಕೆಯನ್ನು ತಬ್ಬಿಕೊಂಡು ಬೈಕ್ ನಿಲ್ಲಿಸಿ ಕಾಯುತ್ತಿದ್ದ ಲೆನೋ ಬಳಿ ಕರೆದೊಯ್ದಿದ್ದಾನೆ. ಬಳಿಕ ಇಬ್ಬರೂ ಸೇರಿ ಆಕೆಯ
ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಮತ್ತಷ್ಟು ಭೀತಿಗೊಂಡ ಯುವತಿ ರಕ್ಷಣೆಗೆ ಚೀರಿಕೊಂಡಾಗ ಮೊದಲೇ ಇಳಿದು ಮನೆಗೆ ಹೋಗಿದ್ದ ಆಕೆಯ ಸಹೋದರಿ ಹೊರಗೆ ಬಂದು ಆಕೆಯೂ ಕಿರುಚಿಕೊಂಡಿದ್ದಾಳೆ. ಅಷ್ಟರಲ್ಲಿ ರಸ್ತೆಯಲ್ಲಿ ಮೂವರು ಬೈಕ್‌ನಲ್ಲಿ
ಬರುತ್ತಿರುವುದನ್ನು ಕಂಡ ಸುದೇಶ್, ಈ ಬಗ್ಗೆ ಸ್ನೇಹಿತರಿಗೆ ಸೂಚನೆ ನೀಡಿದ್ದಾನೆ. ಇದರಿಂದ ಗಾಬರಿಗೊಂಡ ಅಯ್ಯಪ್ಪ ಹಾಗೂ ಲೆನೋ ಆ ಯುವತಿಯನ್ನು ಕೆಳಗೆ ದೂಡಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸಿಸಿಟಿವಿ ನೀಡಿದ ಸುಳಿವು: ಜ.3ರಂದು ಸಂತ್ರಸ್ತ ಯುವತಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮ ಮನೆಯ ಸಮೀಪದಲ್ಲಿ ವಾಸವಾಗಿರುವ ಪ್ರಶಾಂತ್ ಫ್ರಾನ್ಸಿಸ್ ಎಂಬುವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದನ್ನು
ಗಮನಿಸಿದ್ದಾಳೆ. ನಂತರ ಅವರ ಮನೆಗೆ ತೆರಳಿ, ನಿಮ್ಮ ಮನೆ ಎದುರು ದುಷ್ಕರ್ಮಿಗಳು ನನ್ನ ಪರ್ಸ್ ದೋಚಿ ಪರಾರಿಯಾಗಿದ್ದರು. ಆ ಬೈಕ್ ನೊಂದಣಿ ಸಂಖ್ಯೆ ಪತ್ತೆಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸುವಂತೆ ಕೋರಿದ್ದಳು. ಈ ಮನವಿಗೆ ಸ್ಪಂದಿಸಿದ ಫ್ರಾನ್ಸಿಸ್, ತಮ್ಮ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಲೈಂಗಿಕ ದೌರ್ಜನ್ಯ
ಬೆಳಕಿಗೆ ಬಂದಿದೆ. ಅದೇ ದಿನ ರಾತ್ರಿ ಫ್ರಾನ್ಸಿಸ್ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಅದಕ್ಕಾಗಿ ಡಿ.26ರಿಂದಲೂ ಫ್ರಾನ್ಸಿಸ್ ಮನೆಯ
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಅಯ್ಯಪ್ಪ, ಸುದೇಶ್ ಹಾಗೂ ಸೋಮಶೇಖರ್ ಚಲವಲನ ಗೊತ್ತಾಗಿದೆ. ಬಳಿಕ ಲಾರೆನ್ಸ್ ರಸ್ತೆ ಹಾಗೂ ಕುಳ್ಳಪ್ಪ ಸರ್ಕಲ್ ಸುತ್ತಮುತ್ತ ಆರು ಕಡೆ ಸಿಸಿಟಿವಿ ಕ್ಯಾಮೆರಾದಲ್ಲಿ ಶನಿವಾರ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಒಂದು ಕ್ಯಾಮೆರಾದಲ್ಲಿ ಸೋಮಶೇಖರ್ ಮುಖಚಹರೆ ಸ್ಪಷ್ಟವಾಗಿ ತಿಳಿದಿದೆ. ಕೂಡಲೇ ಪೊಲೀಸರು ಕೆ.ಆರ್.ಪುರ ಬಳಿ ಗೆಳೆಯನ ಮನೆಯಲ್ಲಿ ಆಶ್ರಯ ಪಡೆದಿದ್ದ ಸೋಮಶೇಖರ್‌ನನ್ನು ಸೆರೆ ಹಿಡಿದಿದ್ದಾರೆ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಇನ್ನುಳಿದವರ ಸುಳಿವು ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.