Advertisement

ಪ್ರತಿಷ್ಠಿತರ ಮನೆ ದೋಚುತ್ತಿದ್ದ ನಾಲ್ವರ ಬಂಧನ

11:59 AM Aug 19, 2018 | Team Udayavani |

ಬೆಂಗಳೂರು: ಪತಿಷ್ಠಿತರ ಮನೆಗಳಲ್ಲಿ ದರೋಡೆ ಮಾಡಿದ್ದ ಐವರು ದರೋಡೆಕೋರ ತಂಡ  ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದೆ. ಚಿಕ್ಕಬಳ್ಳಾಪುರ ಮೂಲದ ಎನ್‌.ವೈ.ನಾಗರಾಜ್‌ (30), ಗಂಗಾಧರ್‌ (45), ರವಿಕುಮಾರ್‌ (24), ಬಸವರಾಜ್‌ (19), ಗಂಗರಾಜು (25) ಬಂಧಿತರು.

Advertisement

ಕೂಲಿ ಕೆಲಸ ಮಾಡುವ ಆರೋಪಿಗಳು, ಒಂಟಿ ಮಹಿಳೆಯರು ಮತ್ತು ವೃದ್ಧರು ಇರುವ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಯಲಹಂಕ ಮತ್ತು ವಿದ್ಯಾರಣ್ಯಪುರ ಠಾಣೆಗಳಲ್ಲಿ ದಾಖಲಾಗಿದ್ದ 2 ದರೋಡೆ ಪ್ರಕರಣಗಳು ಪತ್ತೆಯಾಗಿವೆ.

ಆ.3ರಂದು ತಡರಾತ್ರಿ ಯಲಹಂಕ ನ್ಯಾಯಾಂಗ ಬಡಾವಣೆಯಲ್ಲಿ ವಾಸವಿದ್ದ ನಿವೃತ್ತ ನ್ಯಾಯಮೂರ್ತಿ ದಿ. ದೇವೇಂದ್ರಯ್ಯ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿದ್ದ ಆರೋಪಿಗಳು, ನ್ಯಾಯಮೂರ್ತಿಗಳ ಪತ್ನಿ ಶ್ರೀಮತಮ್ಮ ಹಾಗೂ ಸಹೋದರಿ ನಿರ್ಮಲಮ್ಮ ಅವರಿಗೆ ಚಾಕು ಮತ್ತು ಕಬ್ಬಿಣದ ರಾಡ್‌ ತೋರಿಸಿ ಬೆದರಿಸಿ, ದೇವರ ಕೋಣೆಯಲ್ಲಿದ್ದ 5 ಲಕ್ಷ ರೂ. ಮೌಲ್ಯದ 250 ಗ್ರಾಂ. ಚಿನ್ನಾಭರಣ ದೋಚಿದ್ದರು.

ವಿಜ್ಞಾನಿ ಮನೆ ದರೋಡೆ: ಜೂ.24ರಂದು ತಡರಾತ್ರಿ 1 ಗಂಟೆಗೆ, ವಿಜ್ಞಾನಿ ದಿ.ಚಂದ್ರಶೇಖರ್‌ ಪತ್ನಿ ಇಲಾ ಚಂದ್ರಶೇಖರ್‌ ವಾಸವಿರುವ ದೊಡ್ಡಬೊಮ್ಮಸಂದ್ರದ ಮೂಕಾಂಬಿಕಾ ಫಾರ್ಮ್ಹೌಸ್‌ನ ಮೊದಲ ಮಹಡಿಯ ಬಾಗಿಲು ಒಡೆದು ಒಳ ನುಗ್ಗಿದ ದರೋಡೆಕೋರರು, ನೆಲ ಮಹಡಿಯ ಕೊಠಡಿಯಲ್ಲಿ ಮಲಗಿದ್ದ ಇಲಾ ಚಂದ್ರಶೇಖರ್‌ರಿಗೆ ಪ್ರಾಣ ಬೆದರಿಕೆ ಒಡ್ಡಿದ್ದರು.

ಬಳಿಕ ಅವರ ಕೈಗಳು, ಬಾಯಿಗೆ ಗಮ್‌ಟೇಪ್‌ ಸುತ್ತಿ, ಕಬೋರ್ಡ್‌ ಒಡೆದು 4 ಚಿನ್ನದ ಕಾಲು ಕಡಗ, ಚಿನ್ನದ ಜಪ ಮಾಲೆ, 100 ವರ್ಷ ಹಳೆಯ ಆಲರ್‌ ಇರುವ ಸರ, ಮುತ್ತಿನ ಸರ, 30 ಸಾವಿರ ನಗದು, ಮೊಬೈಲ್‌ ಮತ್ತು ಮನೆಯ ಕೀಗಳನ್ನು ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ: ದರೋಡೆ ಕೃತ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಯಾಗಿತ್ತು. ಈ ದೃಶ್ಯವನ್ನು ಪರಿಶೀಲಿಸಿದಾಗ ಪ್ರಕರಣ ಪ್ರಮುಖ ಆರೋಪಿ ಗಂಗಾಧರ್‌ ಚಹರೆ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಬೈಕ್‌ ಕಳ್ಳತನ ಪ್ರಕರಣದಲ್ಲಿ ಗಂಗಾಧರ್‌ನನ್ನು ಯಲಹಂಕ ಪೊಲೀಸರು ಬಂಧಿಸಿದ್ದರು.

ಸಿಸಿಟಿವಿಲ್ಲಿದ್ದ ವ್ಯಕ್ತಿಗೂ, ಗಂಗಾಧರ್‌ಗೂ ಹೋಲಿಕೆ ಇರುವುದನ್ನು ಗಮನಿಸಿದ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಮಾಡಿದ್ದಾಗಿ ಹೇಳಿದ್ದಾನೆ. ಈತ ನೀಡಿದ ಮಾಹಿತಿ ಆಧರಿಸಿ ಇತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್ಕೇಪ್‌ ಕಾರ್ತಿಕ್‌ ಬಲೆಗೆ: ಕುಖ್ಯಾತ ಮನೆಗಳ್ಳ ಕಾರ್ತಿಕ್‌ ಕುಮಾರ್‌ ಅಲಿಯಾಸ್‌ ಎಸ್ಕೇಪ್‌ ಕಾರ್ತಿಕ್‌ (28)ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 30 ಲಕ್ಷ ರೂ. ಮೌಲ್ಯದ 1 ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

10 ವರ್ಷಗಳಿಂದ ದರೋಡೆ ಮಾಡುತ್ತಿದ್ದ ಕಾರ್ತಿಕ್‌, ನಕಲಿ ಕೀ ಬಳಸಿ ಮನೆಬಳ ಬೀಗ ತೆಗೆದು ದರೋಡೆ ಮಾಡುತ್ತಿದ್ದ. ಆರೋಪಿ ಮೇ 23ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾರಣ್ಯಪುರದ ಸಿಂಹಾದ್ರಿ ಲೇಔಟ್‌ ನಿವಾಸಿ ಪ್ರೀತಿ ಸುರೇಶ್‌ ಮನೆಯಲ್ಲಿ ಕಳವು ಮಾಡಿದ್ದ. ಈತ ಎರಡು ಬಾರಿ ಜೈಲಿನಿಂದ ಪರಾರಿಯಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಡಿಕಲ್‌ ಜಗ್ಗ ಅಂದರ್‌: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮಾಗಡಿ ತಾಲೂಕಿನ ಜಗದೀಶ್‌ ಕುಮಾರ್‌ ಅಲಿಯಾಸ್‌ ಮೆಡಿಕಲ್‌ ಜಗ್ಗ (34)ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 6 ಲಕ್ಷ ರೂ. ಮೌಲ್ಯದ 200 ಗ್ರಾಂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರಣ್ಯಪುರದ ಸಿಂಗಾಪುರ ನಿವಾಸಿ ಸುಜಾತಾ ಎಂಬುವವರ ಪತಿ ಮಾ.27ರಂದು ಕೆಲಸದ ನಿಮಿತ್ತ ಬಾಂಗ್ಲಾದೇಶಕ್ಕೆ ಹೋಗಿದ್ದರು. ಪತ್ನಿ ಸುಜಾತ ಮನೆಗೆ ಬೀಗ ಹಾಕಿ ಸಂಬಂಧಿ ಮನೆಗೆ ಹೋಗಿದ್ದರು. ಆ ವೇಳೆ ಜಗದೀಶ್‌ ಕನ್ನ ಹಾಕಿದ್ದ. ಇದಕ್ಕೂ ಮೊದಲು ಆರೋಪಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next