ಚಿಂತಾಮಣಿ: ಗ್ರಾಮದಲ್ಲಿ ಮದ್ಯ ಮಾರಬೇಡಿ, ನಮ್ಮ ಪತಿ ಹಾಗೂ ಯುವಕರು ಮದ್ಯದ ದಾಸಕ್ಕೆ ಬಲಿಯಾಗುತ್ತಿದ್ದಾರೆಂದು ಹೇಳಿದ್ದಕ್ಕೆ ಅಂಗಡಿ ಮಾಲಿಕ ಹಾಗೂ ಅವರ ಕುಟುಂಬದವರು ಓರ್ವ ಮಹಿಳೆ ಸೇರಿದಂತೆ ನಾಲ್ವರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಾಮಪುರದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ರಾಮಪುರ ಗ್ರಾಮದಲ್ಲಿ ಹಲವು ವರ್ಷಗಳಿಂದ ನಾರಾಯಣಸ್ವಾಮಿ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ಬೋವಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ.
ಮದ್ಯ ಮಾರಾಟ ಮುಂದುವರಿಕೆ: ಗ್ರಾಮದಲ್ಲಿ ಕುಡಿತದ ದಾಸರಾಗಿ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳಿದ್ದರಿಂದ ಗ್ರಾಮದ ಕೆಲ ಮಹಿಳೆಯರು ಮದ್ಯ ಮಾರಾಟ ಮಾಡಬೇಡಿ ಎಂದು ಹಲವು ಬಾರಿ ನಾರಾಯಣಸ್ವಾಮಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ಮಹಿಳೆಯರ ಮಾತಿಗೆ ಬೆಲೆ ಕೊಡದ ನಾರಾಯಣಸ್ವಾಮಿ ಮದ್ಯ ಮಾರಾಟ ಮುಂದುವರಿಸುತ್ತೇಂದು ಏರುಧ್ವನಿಯಲ್ಲಿ ಹೇಳಿದರು ಎಂದು ತಿಳಿದು ಬಂದಿದೆ.
ದೂರು ನೀಡುತ್ತೇನೆ ಎಂದಿದ್ದೇ ಕಾರಣ: ಆದರೆ, ಸೋಮವಾರ ರಾತ್ರಿ ಕುಡಿದು ಮನೆಗೆ ಬಂದ ತನ್ನ ಪತಿಯ ಕಾಟ ತಾಳಲಾರದೇ ಗೌತಮಿ ಎಂಬ ಮಹಿಳೆಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾರಾಯಣಸ್ವಾಮಿ ಅಂಗಡಿ ಬಳಿ ಬಂದು ಅಕ್ರಮವಾಗಿ ಮದ್ಯ ಮರಾಟ ಮಾಡಬೇಡಿ, ಇದರಿಂದ ನಮ್ಮ ಸಂಸಾರ ಹಾಳಾಗುತ್ತಿದೆ. ಗ್ರಾಮದಲ್ಲಿ ಅನೇಕರು ಕುಡಿತದ ಚಟಕ್ಕೆ ಒಳಗಾಗಿದ್ದಾರೆ, ತಾವು ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸದಿದ್ದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದೇ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಮಾರಣಾಂತಿಕ ಹಲ್ಲೆ: ಗೌತಮಿ ಹೇಳಿದ ಮಾತಿಗೆ ಕುಪಿತಗೊಂಡ ಅಂಗಡಿ ಮಾಲಿಕ ನಾರಾಯಣಸ್ವಾಮಿ, ಈತನ ಸಹೋದರ ಶ್ರೀನಿವಾಸ್, ವೆಂಕಟರವಣ, ಬಾಬು, ಮಮತಾ, ವೆಂಕಟರತ್ನಮ್ಮ, ರಾಮಕ್ಕ ಎಂಬುವವರೊಂದಿಗೆ ಗೌತಮಿ ಮೇಲೆ ಮನಸೋ ಇಚ್ಚೆ ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ. ಇದೇ ವೇಳೆ ಗೌತಮಿ ನೆರವಿಗೆ ಧಾವಿಸಿದ ಭಾವ ವೆಂಕಟರವಣಪ್ಪ, ಭಾವನ ಮಗ ನಿತಿನ್, ಮಾವ ಚಿಕ್ಕ ತಿರುಮಲ್ಲಪ್ಪ ಅವರ ಮೇಲೆಯೂ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಗಾಯಾಳುಗಳಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಅಬಕಾರಿ ಇಲಾಖೆ ನಿರ್ಲಕ್ಷ್ಯವೇ ಕಾರಣ: ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸದಿದ್ದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದೇ ಘಟನೆಗೆ ಪ್ರಮುಖ ಕಾರಣ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ಇದ್ದರೂ ಕಳೆದ 5-6 ವರ್ಷಗಳಿಂದಲೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು. ಕಲ್ಲುಗಳಿಂದ ತಲೆಗೆ ಹೊಡೆದರು ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ ಅಂಗಡಿ ಮಾಲಿಕ ನಾರಾಯಣಸ್ವಾಮಿ, ಕಣ್ಣಿಗೆ ಮಣ್ಣು ಎರಚಿ ಕಲ್ಲುಗಳಿಂದ ತಲೆಗೆ ಹೊಡೆದರು ಎಂದು ಗಾಯಾಳು ಗೌತಮಿ ತಮ್ಮ ಅಳಲು ತೋಡಿಕೊಂಡರು. ಘಟನೆ ಬಳಿಕ ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗೌತಮಿ ಎಂಬ ಮಹಿಳೆಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ.