Advertisement

ಬಜೆಟ್‌ಗೆ ಸಲಹೆ ನೀಡಲು ಬಂದದ್ದು  ನಾಲ್ಕೇ ಮಂದಿ..!

02:27 PM Feb 07, 2018 | |

ಸುಳ್ಯ : ಸುಳ್ಯ ನಗರ ಪಂಚಾಯತ್‌ನ 2018-19ನೇ ಸಾಲಿನ ಬಜೆಟ್‌ ಮಂಡನೆಗೆ ಪೂರ್ವಭಾವಿಯಾಗಿ ಸಾರ್ವಜನಿಕರ ಸಲಹೆ ಪಡೆಯಲು ಮಂಗಳವಾರ ಆಯೋಜಿಸಿದ್ದ ಸಭೆಗೆ ಬಂದವರು ನಾಲ್ವರು ಮಾತ್ರ!

Advertisement

ಇಡೀ ಸಭೆಯಲ್ಲಿ ಉಪಸ್ಥಿತರಿದ್ದವರು 12 ಜನ. ಹೀಗಾಗಿ, ಪೂರ್ವಭಾವಿ ಸಭೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ನ.ಪಂ.
ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ಮಂಡಿಸಿ, ಸಭೆ ಮುಕ್ತಾಯ ಮಾಡಲಾಯಿತು. ಮಾಹಿತಿ ಕೊರತೆಯಿಂದಾಗಿ ಜನ ಸಭೆಗೆ ಬರಲಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂತು.

ಮುರಳಿ ಮಾವಂಜಿ ಮಾತನಾಡಿ, ವಾರ್ಡ್‌ ಸಂಖ್ಯೆ 6, 7ರ ಮಧ್ಯೆ ಇರುವ ರಸ್ತೆ ಯಾರ ವಾರ್ಡ್‌ಗೆ ಬರುತ್ತದೆ ಎಂಬುವುದು ಖಾತರಿ ಇಲ್ಲ. ಇಬ್ಬರೂ ಸದಸ್ಯರು ತಮ್ಮ ವ್ಯಾಪ್ತಿಗಿಲ್ಲ ಎನ್ನುವ ಸ್ಥಿತಿ ಇದೆ. ಆ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ, ಸಂಪರ್ಕ ರಸ್ತೆಯನ್ನಾಗಿ ಬಳಸಬಹುದು ಎಂದರು.

ಕಿಂಡಿ ಅಣೆಕಟ್ಟು
ನಗರದ ಬದಿಯಲ್ಲೇ ಹಾದು ಹೋಗಿರುವ ಪಯಸ್ವಿನಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಪ್ರತಿ ವರ್ಷ 4 ಲಕ್ಷ ರೂ. ವ್ಯಯಿಸಿ ಮರಳಿನ ಕಟ್ಟ ನಿರ್ಮಿಸಲಾಗುತ್ತಿದೆ. ಆ ಹಣದಿಂದಲೇ ಕಿಂಡಿ ಅಣೆಕಟ್ಟು ಪೂರ್ಣ ಆಗಬಹುದಿತ್ತು. ಇಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿ ಕಾಸರಗೋಡಿನಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಇದು ಡ್ಯಾಂ ಅಲ್ಲ. ಕಿಂಡಿ ಅಣೆಕಟ್ಟು ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು ಎಂದರು.

ನ.ಪಂ. ಸದಸ್ಯ ಎನ್‌.ಎ. ರಾಮಚಂದ್ರ ಮಾತನಾಡಿ, 64 ಕೋಟಿ ರೂ. ಪ್ರಸ್ತಾವನೆಯ ಯೋಜನೆ ಸರಕಾರದ ಹಂತದಲ್ಲಿದ್ದು, ಇದರ ಜಾರಿಗೆ ಸರಕಾರದ ಮಟ್ಟದಲ್ಲಿ ಮಾತುಕತೆ ಪ್ರಕ್ರಿಯೆ ನಡೆಯಬೇಕಿದೆ. ಒಂದಷ್ಟು ಪ್ರಯತ್ನ
ಪಟ್ಟರೆ ಮಂಜೂರು ಆದೀತು ಎಂದು ನುಡಿದರು.

Advertisement

ಪ್ರತಿಮೆ ಸ್ಥಳಾಂತರ
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ನಿರ್ಮಿಸಲು ಉದ್ದೇಶಿಸಿದ್ದ ಕುರುಂಜಿ ವೆಂಕಟರಮಣ ಗೌಡ ಪ್ರತಿಮೆಯನ್ನು ಈಗ ಖಾಸಗಿ ಬಸ್‌ ನಿಲ್ದಾಣದ ಹೂವಿನ ಮಾರುಕಟ್ಟೆ ಬಳಿ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಇದೆ. ಅಲ್ಲಿ ನಿರ್ಮಿಸಿದರೆ ರಸ್ತೆ ವಿಸ್ತರಣೆ ಸಂದರ್ಭ ಪ್ರತಿಮೆಗೆ ತೊಂದರೆ ಆಗಬಹುದು ಎಂದು ಮುರಳಿ ಮಾವಂಜಿ ಹೇಳಿದರು. ಸ್ಥಳಾಂತರ ಮಾಡಿರುವುದು ಹೌದು. ಕೆಎಸ್‌ಆರ್‌ಟಿಸಿ ಬಳಿ ನಿರ್ಮಾಣಕ್ಕೆ ಕೆಲ ತೊಡಕುಗಳಿವೆ. ಆದರೆ ಮುಖ್ಯ ರಸ್ತೆಯಲ್ಲಿ ವಿಸ್ತರಣೆ ಆಗುವುದಿಲ್ಲ. ಹಾಗಾಗಿ ಪ್ರತಿಮೆಗೆ ಸಮಸ್ಯೆ ಇಲ್ಲ ಎಂದು ಎನ್‌ .ಎ. ರಾಮಚಂದ್ರ ನುಡಿದರು.

ಸಾಮಾಜಿಕ ಕಾರ್ಯಕರ್ತ ಅಶೋಕ ಎಡಮಲೆ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿ ಡಾಟಾ ಮಾದರಿ ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ನೀರು ಸರಬರಾಜಿಗೆ ಕ್ರಮ, ಕಟ್ಟಡ ಕಟ್ಟುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ನೆಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಇತ್ಯಾದಿ ಅಭಿವೃದ್ಧಿಗಳ ಬಗ್ಗೆ ಸೂಕ್ತ ಸಲಹೆ ನೀಡಿದರು.

ನಗರ ಪಂಚಾಯತ್‌ ಸದಸ್ಯ ಗೋಪಾಲ ನಡುಬೈಲು ಮಾತನಾಡಿ, ಕುಡಿಯುವ ನೀರಿಗೆ ಖರ್ಚು ಕಡಿಮೆ ಮಾಡುವುದು, ಒಳಚರಂಡಿ ವ್ಯವಸ್ಥೆ ಸುಧಾರಿಸುವ ಬಗ್ಗೆ ಸಲಹೆ ನೀಡಿದರು. ರಶೀದ್‌ ಜಟ್ಟಿಪಳ್ಳ ಮಾತನಾಡಿ, ಕುರುಂಜಿಗುಡ್ಡೆಯಲ್ಲಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸದಸ್ಯ ಉಮ್ಮರ್‌ ಕೆ.ಎಸ್‌ ಮಾತನಾಡಿ, ನಗರದಲ್ಲಿ 1.22 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ ಅನ್ನುವುದು ನ.ಪಂ. ಲೆಕ್ಕಾಚಾರ. ಆದರೆ ತೆರಿಗೆ ವಿಧಿಸುವುದು ಸಮರ್ಪಕವಾಗಿ ನಡೆದರೆ, 3 ಕೋಟಿ ರೂ. ಆದಾಯ ಬರಬಹುದು. ಕೆಲ ಕಟ್ಟಡಗಳ ವಿಸ್ತರಿತ ಅಂತಸ್ತುಗಳಿಗೆ ತೆರಿಗೆಯೇ ಸಂಗ್ರಹಿಸುತ್ತಿಲ್ಲ. ಹಾಗಾಗಿ ರೀ ಸರ್ವೆ ನಡೆಸಿ ತೆರಿಗೆ ಪಟ್ಟಿ
ತಯಾರಿಸಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್‌ ಕುರುಂಜಿಗುಡ್ಡೆ, ಮುಖ್ಯಾಧಿಕಾರಿ ಗೋಪಾಲ ನಾೖಕ್‌ ಉಪಸ್ಥಿತರಿದ್ದರು.

ನಗರದ ವ್ಯಾಪ್ತಿಗೆ ಸೇರಿಸಿ
ಶ್ರೀಪತಿ ಭಟ್‌ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ನಗರದ ಅಂಚಿನಲ್ಲಿರುವ ಅರಂಬೂರು, ನಾಗಪಟ್ಟಣ, ಕಾಂತಮಂಗಲವನ್ನು ನಗರ ಪಂಚಾಯತ್‌ ವ್ಯಾಪ್ತಿಗೆ ಸೇರಿಸುವುದು ಒಳಿತು. ಅಲ್ಲಿನ ಕೆಲ ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕಿದೆ. ನಗರದ ಜನಸಂಖ್ಯೆ ದುಪ್ಪಟ್ಟಾಗಿದ್ದು, ನ.ಪಂ.ನ್ನು ಪುರಸಭೆಯಾಗಿ ಮೇಲ್ದ ರ್ಜೆಗೆ ಏರಿಸಬೇಕು. ಬಸ್‌ ನಿಲ್ದಾಣದ ಬಳಿಯ ಮುಖ್ಯ ರಸ್ತೆ ದಾಟಲು ಸಿ.ಎ. ಬ್ಯಾಂಕ್‌ ಬಳಿಯಿಂದ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next