ನವದೆಹಲಿ: ಕೋವಿಡ್ ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೋವಿಡ್ ಲಸಿಕೆ ಅಭಿಯಾನ ವಿಸ್ತರಿಸಿದ್ದು, ಮೇ 1ರಿಂದ 18ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದ ಬೆನ್ನಲ್ಲೇ ಕೆಲವು ಬಿಜೆಪಿಯೇತರ ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಮೇ 1ರಂದು ಲಸಿಕೆ ಅಭಿಯಾನ ನಡೆಸಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೊದಲು ಕೊವಿಶೀಲ್ಡ್ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್ ಪಡೆಯಬಹುದೇ? ಇಲ್ಲಿದೆ ಪರಿಹಾರ
ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮತ್ತು ಛತ್ತೀಸ್ ಗಢ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 3ನೇ ಹಂತದ ಲಸಿಕೆ ಅಭಿಯಾನದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಮೇ 15ರ ಮೊದಲು ಕೋವಿಡ್ 19 ಲಸಿಕೆಯ ಡೋಸ್ ಗಳನ್ನು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ ಐಐ) ತಿಳಿಸಿರುವುದಾಗಿ ರಾಜಸ್ಥಾನ್ ಸರಕಾರ ತಿಳಿಸಿದೆ. ನಮಗೆ ಕೋವಿಡ್ ಲಸಿಕೆ ವಿತರಿಸಲು ಮೇ 15ರವರೆಗೆ ಸಮಯಾವಕಾಶ ಬೇಕು ಎಂದು ಸೀರಂ ಸಂಸ್ಥೆ ತಿಳಿಸಿರುವುದಾಗಿ ರಾಜಸ್ಥಾನ್ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.
ಒಂದು ವೇಳೆ ಲಸಿಕೆಯನ್ನು ನೇರವಾಗಿ ಖರೀದಿಸಬೇಕಿದ್ದರೆ ಅದಕ್ಕೆ ಇರುವ ಪ್ರಕ್ರಿಯೆ ಏನು? ಈ ಬಗ್ಗೆ ಕೇಂದ್ರ ಸರಕಾರ ನಿರ್ಧರಿಸಬೇಕು. ರಾಜ್ಯದಲ್ಲಿ 18ರಿಂದ 45 ವರ್ಷದ ಅಂದಾಜು 3.3ಕೋಟಿ ಜನರು ರಾಜ್ಯದಲ್ಲಿದ್ದಾರೆ. ನಾವು ಹೇಗೆ ಲಸಿಕೆ ನೀಡಲು ಸಾಧ್ಯ? ಎಂದು ಶರ್ಮಾ ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ಆರೋಗ್ಯ ಸಚಿವ ಶರ್ಮಾ ಅವರು ಪಂಜಾಬ್, ಛತ್ತೀಸ್ ಗಢ್ ಮತ್ತು ಜಾರ್ಖಂಡ್ ರಾಜ್ಯಗಳ ಸಚಿವರ ಜತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.