ಕಡಬ: ಪುತ್ತೂರು ತಾಲೂಕಿನ ಹಳೆ ನೇರೆಂಕಿ ಗ್ರಾಮದ ಆರಟಿಗೆ ಕೊರಗಪ್ಪ ಪೂಜಾರಿ ಅವರ ಪುತ್ರ ಕೃಷ್ಣ ಪ್ರಸಾದ್ ಎ. (26) ಸೇರಿದಂತೆ ರಾಜ್ಯದ ನಾಲ್ವರು ಯುವಕರು ದಿಲ್ಲಿಯಲ್ಲಿ ಅಪಹರಣಕ್ಕೊಳಗಾಗಿ ಅಪಹರಣಕಾರರು ಅವರನ್ನು ಒತ್ತೆಯಿರಿಸಿಕೊಂಡು ಹಣದ ಬೇಡಿಕೆ ಇರಿಸಿರುವ ಬಗ್ಗೆ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣ ಪ್ರಸಾದ್ ನಾಪತ್ತೆಯಾಗಿರುವ ಕುರಿತು ಆತನ ತಂದೆ ಕಡಬ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕೃಷ್ಣಪ್ರಸಾದ್ ಜತೆಗೆ ಆತನ ಗೆಳೆಯರಾದ ಕಲ್ಲಡ್ಕದ ಪ್ರಶಾಂತ್, ವಳಾಲಿನ ಅಭಿಲಾಷ್ ಕೂಡ ಇದ್ದರು ಎಂದು ಕೃಷ್ಣಪ್ರಸಾದನ ಹೆತ್ತವರು ತಿಳಿಸಿದ್ದಾರೆ. ಕೃಷ್ಣಪ್ರಸಾದ್ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ ಬಳಿಕ ಕಳೆದ 2 ವರ್ಷಗಳಿಂದ ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.
ಹದಿನೈದು ದಿನಗಳ ಹಿಂದೆ ಊರಿಗೆ ಬಂದಿದ್ದ ಕೃಷ್ಣಪ್ರಸಾದ್ ನಾನು ಜೂನ್ 18 ರಂದು ಬೆಂಗಳೂರಿನ ತನ್ನ ಮಿತ್ರರೊಡನೆ ಜಿಮ್‌ಗೆ ಸಂಬಂಧಪಟ್ಟ ಪರಿಕರಗಳನ್ನು ಖರೀದಿಸುವುದಕ್ಕಾಗಿ ದಿಲ್ಲಿಗೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಬೆಂಗಳೂರಿಗೆ ಹಿಂದಿರುಗಿದ್ದರು. ಜೂ. 20ರಂದು ಮನೆಗೆ ದೂರವಾಣಿ ಕರೆ ಮಾಡಿದ ಕೃಷ್ಣಪ್ರಸಾದ್ ದಿಲ್ಲಿಗೆ ತಲುಪಿದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ದೂರವಾಣಿ ಕರೆ ಮಾಡಿದ ಕೃಷ್ಣಪ್ರಸಾದ್ ನಮ್ಮನ್ನು ಇಲ್ಲಿ ಯಾರೋ ಅಪಹರಣ ಮಾಡಿದ್ದಾರೆ. ನಮ್ಮಲ್ಲಿದ್ದ ಎಟಿಎಂ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ಮನೆಯವರಿಗೆ ಹೇಳಿ ಬ್ಯಾಂಕ್ ನಿಮ್ಮ ಖಾತೆಗೆ 3 ಲಕ್ಷ ರೂ.ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವರೆಗೆ 3 ಬಾರಿ ಕರೆ ಮಾಡಿ ತನ್ನ ಖಾತೆಗೆ 3 ಲಕ್ಷ ರೂ. ಜಮೆ ಮಾಡಿ. ಇಲ್ಲದಿದ್ದರೆ ನಾನು ಜೀವಂತವಾಗಿ ಉಳಿಯುವುದಿಲ್ಲ. ನನ್ನನ್ನು ಇಲ್ಲಿ ಕೊಲೆ ಮಾಡುತ್ತಾರೆ ಎಂದು ಕೃಷ್ಣಪ್ರಸಾದ್ ಗೋಗರೆದಿದ್ದಾನೆ ಎಂದು ಹೆತ್ತವರು ಹೇಳಿಕೊಂಡಿದ್ದಾರೆ.
ಕೃಷ್ಣಪ್ರಸಾದ್ ಮಾತ್ರವಲ್ಲ ಉಳಿದ ಮೂವರು ಸ್ನೇಹಿತರಿಗೂ ಇದೇ ರೀತಿಯ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಕೃಷ್ಣಪ್ರಸಾದನ ಹೆತ್ತವರು ತಮ್ಮ ಮಕ್ಕಳನ್ನು ರಕ್ಷಿಸಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮನವಿ ಮಾಡಿದ್ದಾರೆ. ಸಚಿವರು ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಯುವಕರು ದೂರವಾಣಿ ಕರೆ ಮಾಡುತ್ತಿರುವುದು ಹರಿಯಾಣ ಹಾಗೂ ದಿಲ್ಲಿ ಬಾರ್ಡರ್ ಲೋಕೇಷನ್‌ನಿಂದ ಎಂದು ಪತ್ತೆಯಾಗಿದ್ದು, ಪೊಲೀಸರು ಈಗಾಗಲೇ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.