ಭೋಪಾಲ್: ಗುಜರಿ ತುಂಬಿದ ಟ್ರಕ್ ಕಾರೊಂದರ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುನಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ(ಡಿ.26 ರಂದು) ನಡೆದಿದೆ.
ರಾಜ್‌ಗಢ್ ಜಿಲ್ಲೆಯ ದಂಪತಿಗಳು ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದು,ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ರಾಷ್ಟ್ರೀಯ ಹೆದ್ದಾರಿ 46 ರಲ್ಲಿ ಕುಟುಂಬದ ಸದಸ್ಯರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಗುಜರಿ ತುಂಬಿದ ಟ್ರಕ್ ವೊಂದು ಕಾರನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆಯೇ ಬಿದ್ದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಆದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣತೆತ್ತಿದ್ದಾರೆ. ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ವರದಿಯಾಗಿದೆ.
ಟ್ರಕ್ 40 ಟನ್‌ಗಳಿಗಿಂತ ಹೆಚ್ಚು ಗುಜರಿಯನ್ನು ಹೊತ್ತೊಯ್ಯುತ್ತಿತ್ತು. ರಸ್ತೆಯಲ್ಲಿ ಮಂಜು ಆವರಿಸಿದ್ದ ಕಾರಣದಿಂದ ಸರಿಯಾಗಿ ಮಾರ್ಗ ಗೋಚರಿಸದೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೊಲೀಸರು ಕಾರಿನ ನೋಂದಣಿ ಸಂಖ್ಯೆಯ ಸಹಾಯದಿಂದ ಮೃತ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಟ್ರಕ್ ತುಂಬಾ ಭಾರವಾಗಿದ್ದರಿಂದ ಪೊಲೀಸರು ಅದನ್ನು ಮೇಲೆತ್ತಲು ಕ್ರೇನ್ ಮತ್ತು ಗುಜರಿಯನ್ನು ತೆಗೆಯಲು ಜೆಸಿಬಿ ಯಂತ್ರವನ್ನು ಬಳಸಿದ್ದಾರೆ.
ಗುಜರಿಯನ್ನು ತೆಗೆದ ನಂತರವೇ ಟ್ರಕ್ ನ್ನು ಚಲಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.