Advertisement
ಐಪಿಎಲ್,ಚುನಾವಣೆ ಬಳಿಕ ಸರತಿ ಸಾಲಿನಲ್ಲಿ ಒಂದೊಂದೇ ಚಿತ್ರಗಳು ಥಿಯೇಟರ್ ಗೆ ಎಂಟ್ರಿ ಕೊಡುತ್ತಿದೆ. ಈಗಾಗಲೇ ಬಹು ನಿರೀಕ್ಷಿತ ಸ್ಟಾರ್ ನಟರ ಚಿತ್ರಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ವರ್ಷದ ಮೊದಲಾರ್ಧದಲ್ಲಿ ಚಿತ್ರಗಳು ರಿಲೀಸ್ ಆಗಿಲ್ಲ ಅಂಥೇನಿಲ್ಲ. ಕನ್ನಡ ಚಿತ್ರಗಳು ರಿಲೀಸ್ ಆಗಿವೆ. ಆದರೆ ಹೇಳುವಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ.
Related Articles
Advertisement
ಕೋಟಿ: ಡಾಲಿ ಧನಂಜಯ್ ಅಭಿನಯದ ʼಕೋಟಿʼ ಇತ್ತೀಚೆಗಿನ ದಿನಗಳಲ್ಲಿ ಚಂದನವನದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರಗಳಿಂದ ಸುದ್ದಿಯಾಗಿರುವ ʼಕೋಟಿʼ ಥಿಯೇಟರ್ ನಲ್ಲಿ ಕಮಾಲ್ ಮಾಡಲು ಕಾಯುತ್ತಿದೆ.
ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಮೊದಲ ಬಾರಿಗೆ ʼಕೋಟಿʼ ಮೂಲಕ ಕನ್ನಡ ಸಿನಿಮಾವೊಂದಕ್ಕೆ ಬಂಡವಾಳ ಹಾಕಲಿದೆ. ಈ ಚಿತ್ರವನ್ನು ಪರಮ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಗಮನ ಸೆಳೆದಿದೆ. ಹೊಸ ರೀತಿಯ ಕಥೆಯನ್ನು ಹೇಳಲು ಇದೇ ಜೂ.14 ರಂದು ಥಿಯೇಟರ್ ʼಕೋಟಿʼ ಲಗ್ಗೆ ಇಡಲಿದೆ.
ಚೆಫ್ ಚಿದಂಬರ: ಅನಿರುದ್ಧ್ ಜಟ್ಕರ್ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ʼಚೆಫ್ ಚಿದಂಬರʼ ಇತ್ತೀಚೆಗೆ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಡಾರ್ಕ್ ಕಾಮಿಡಿ ಕಥೆಯನ್ನು ಥ್ರಿಲ್ಲರ್ ಮಾದರಿಯಲ್ಲಿ ಹೇಳಲಾಗಿದ್ದು, ಅನಿರುದ್ಧ್ ಟ್ರೇಲರ್ ನಲ್ಲಿ ಗಮನ ಸೆಳೆದಿದ್ದಾರೆ.
ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ನಾಯಕಿಯರಾಗಿ ನಟಿಸಿದ್ದಾರೆ. ಆನಂದರಾಜ್ ಎಂ. ನಿರ್ದೇಶಿಸಿರುವ ಈ ಸಿನಿಮಾ ಜೂ.14 ರಂದು ರಿಲೀಸ್ ಆಗಲಿದೆ.
ಶಿವಮ್ಮ: ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ ‘ಶಿವಮ್ಮʼ ಚಿತ್ರ ಕೂಡ ಜೂ.14 ರಂದು ರಿಲೀಸ್ ಆಗಲಿದೆ.
ಜೈಶಂಕರ್ ಆರ್ಯರ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡಿಕೊಂಡ ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಆಕೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.