ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದ ಮತ್ತೆ ನಾಲ್ವರ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಾಳೆ ಪ್ರಯೋಗಾಲಯದ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ದೇಶಗಳಿಂದ ಜಿಲ್ಲೆಗೆ ಇದುವರೆಗೆ 61 ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಒಬ್ಬರಿಗೆ ಕೊರೊನಾ ಲಕ್ಷಣ ಪತ್ತೆಯಾದ ಕಾರಣ ಮಾದರಿಯ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಇಎಸ್ಐನಲ್ಲಿ 8 ಜನ: ಕೊರೊನಾದಿಂದ ಮೃತಪಟ್ಟ 71 ವರ್ಷದ ವ್ಯಕ್ತಿಯ ಕುಟುಂಬದ ಸೋಂಕು ದೃಢಪಟ್ಟ ಮಹಿಳೆ ಹಾಗೂ ನೆಗೆಟಿವ್ ಬಂದ ಮೂವರು ಹಾಗೂ ಈಗ ಲಕ್ಷಣಗಳು ಕಾಣಿಸಿಕೊಂಡ ನಾಲ್ವರು ಸೇರಿದಂತೆ ಒಟ್ಟಾರೆ ಎಂಟು ಜನರನ್ನು ಇಎಸ್ಐ ಆಸ್ಪತ್ರೆಯಲ್ಲಿ ಐಸೋಲೇಟೆಡ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
370 ಜನರ ಮೇಲೆ ನಿಗಾ: ಮುನ್ನೆಚ್ಚರಿಕೆ ಕ್ರಮವಾಗಿ ಮೃತಪಟ್ಟ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿದ್ದ 71 ಜನರು, ಎರಡನೇ ಸಂಪರ್ಕದಲ್ಲಿದ್ದ 238 ಜನರನ್ನು ಗುರುತಿಸಲಾಗಿದೆ. ಜತೆಗೆ ವಿದೇಶಗಳಿಂದ ಬಂದ 61 ಜನರ ಮೇಲೂ ನಿಗಾ ವಹಿಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ 370 ಜನರನ್ನು ಮನೆಗಳಲ್ಲೇ ಇರಿಸಿ ನಿಗಾ ವಹಿಸುವ ಕಾರ್ಯವಾಗುತ್ತಿದೆ ಎಂದು ಮಾಹಿತಿ ನೀಡಿದರು.
3,000 ಮನೆಗಳ ಸರ್ವೆ: ಸೋಂಕಿನಿಂದ ಮೃತಪಟ್ಟ ವ್ಯಕ್ತಿ ವಾಸವಿದ್ದ ಬಡಾವಣೆಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಬಡಾವಣೆ ವ್ಯಾಪ್ತಿಯಲ್ಲಿ ಜನರ ಆತಂಕ ಕಡಿಮೆ ಮಾಡಲು ಮತ್ತು ಎಚ್ಚರಿಕೆ ಕ್ರಮವಾಗಿ 50 ಆರೋಗ್ಯ ತಂಡಗಳನ್ನು ರಚಿಸಿ ಸರ್ವೆ ಮಾಡಿಸಲಾಗಿದೆ. ಒಟ್ಟಾರೆ ಮೂರು ಸಾವಿರ ಮನೆಗಳನ್ನು ಸರ್ವೆ ಮಾಡಲಾಗಿದೆ. ಅಲ್ಲಿ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದರು.