Advertisement

ಬೋಟುಗಳಿಗೆ ನಾಲ್ಕು ತಿಂಗಳ ಡೀಸೆಲ್‌ ಸಬ್ಸಿಡಿ ಬಾಕಿ

10:25 AM Mar 09, 2020 | mahesh |

ಮಲ್ಪೆ: ಒಂದೆಡೆ ಮೀನಿನ ಕ್ಷಾಮ, ಮತ್ತೂಂದೆಡೆ ಮೇಲಿಂದ ಮೇಲೆ ಎರಗಿದ ಚಂಡಮಾರುತದಿಂದಾಗಿ ಲಕ್ಷಾಂತರ ರೂ. ಬಂಡವಾಳ ಹೂಡಿ ನಡೆಸುವ ಮೀನುಗಾರಿಕೆಗೆ ಈ ಬಾರಿಯೂ ದೊಡ್ಡ ಹೊಡೆತ ಉಂಟಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಡೀಸೆಲ್‌ ಸಬ್ಸಿಡಿಯನ್ನೂ ನೀಡಿದೆ ಸರಕಾರ ಬಾಕಿ ಇಟ್ಟುಕೊಂಡಿದ್ದು ಮೀನುಗಾರರನ್ನು ಸಂಕಷ್ಟಕ್ಕೆ ದೂಡಿದೆ.

Advertisement

ಪ್ರತಿ ಲೀ.ಗೆ 11.28 ಪೈಸೆ ಸಬ್ಸಿಡಿ
ಪ್ರತಿ ಯಾಂತ್ರೀಕೃತ ಬೋಟ್‌ಗೆ ಬಳಸುವ ಪ್ರತೀ ಲೀಟರ್‌ 11.28 ಪೈಸೆಯಷ್ಟು ಸಬ್ಸಿಡಿ ದೋಣಿ ಮಾಲಕನ ಖಾತೆಗೆ ಜಮಾ ಅಗುತ್ತದೆ. ಆಯಾ ಬೋಟ್‌ಗಳ ಡೀಸೆಲ್‌ ಬಳಕೆಯ ಆಧಾರದ ಮೇಲೆ ಒಂದು ದೋಣಿ ತಿಂಗಳಿಗೆ ಗರಿಷ್ಠ 9 ಸಾವಿರ ಲೀಟರ್‌ವರೆಗೆ ಸಬ್ಸಿಡಿ ಪಡೆಯಬಹುದಾಗಿದೆ. ರಾಜ್ಯದ ಕರಾವಳಿಯ ಮೂರು ಜಿಲ್ಲೆಯಲ್ಲಿ ಒಟ್ಟು 5000ಕ್ಕೂ ಹೆಚ್ಚು ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಿದ್ದು ಬೋಟ್‌ ಮಾಲಕರ ಖಾತೆಗೆ ನವೆಂಬರ್‌ನಿಂದ ಜಮಾ ಆಗುವುದು ಬಾಕಿ ಇದೆ.

ವಿಳಂಬವೇಕೆ?
ಇಲಾಖೆಯ ಉನ್ನತ ಅಧಿಕಾರಿಗಳು ಹೇಳುವಂತೆ ಇಲಾಖೆಯಿಂದ ವಾರ್ಷಿಕವಾಗಿ 1.50 ಲಕ್ಷ ಕಿಲೋ. ಲೀಟರ್‌ ಡೀಸೆಲ್‌ ನೀಡಲಾಗುತ್ತಿದ್ದು, ಕಳೆದ ಬಜೆಟ್‌ನಲ್ಲಿ ಈ ಸಾಲಿನ ಮೀನುಗಾರಿಕೆಗೆ 11 ರೂ. ನಂತೆ 166 ಕೋ ರೂ. ಸಬ್ಸಿಡಿಗೆ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿತ್ತು. ಆದರೆ ಸರಕಾರ ಕೆಲವೊಂದು ಕಾರಣ ಒಡ್ಡಿ 135 ಕೋ. ರೂ. ಮಾತ್ರ ಮಂಜೂರು ಮಾಡಿದೆ. ಈಗಾಗಲೇ 3 ಕಂತಿನ ಹಣ ನೀಡಲಾಗಿದ್ದು, ಇದೀಗ ನಾಲ್ಕನೇ ಕಂತಿನ ಹಣವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆ ಒಂದು ರೇಡರ್‌ ನಿಗದಿ ಪಡಿಸಿದೆಯಂತೆ. ಅದರ ಪ್ರಕಾರ 10 ಕೋ. ರೂಪಾಯಿಗಿಂತ ಹೆಚ್ಚಿಗೆ ಮೊತ್ತ ಬಿಡುಗಡೆಯಾಗಬೇಕಾದರೆ ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕು. ಆ ಪ್ರಕಾರ ಆಡಳಿತ ಇಲಾಖೆಯಿಂದ ಕಾರ್ಯದರ್ಶಿ ಅವರಿಗೆ ಕಡತವನ್ನು ಕಳುಹಿಸಲಾಗಿದ್ದು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಡೆಲಿವರಿ ಪಾಯಿಂಟ್‌ನಲ್ಲಿ ನೀಡಲು ಆಗ್ರಹ
ಈ ಮೊದಲು ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್‌ ನೀಡಲಾಗುತಿತ್ತು. ಪ್ರಸ್ತುತ ಮೀನು ಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ಆನಂತರ ಅವರ ಖಾತೆಗೆ ಈ ಮೊತ್ತವನ್ನು ಸರಕಾರ ಜಮೆ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದಿರುವ ಕಾರಣ ಮೀನುಗಾರರು ತೊಂದರೆ ಯನ್ನು ಅನುಭವಿಸುವಂತಾಗಿದೆ. ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್‌ ನೀಡುವಂತೆ ಮೀನುಗಾರು ಆಗ್ರಹಿಸುತ್ತಿದ್ದಾರೆ.

ಶೇ.50ರಷ್ಟು ಬೋಟ್‌ಲಂಗರು
ಪ್ರಸ್ತುತ ದಿನದಲ್ಲಿ ಮೀನುಗಾರಿಕೆಯಿಂದ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆಳ ಸಮುದ್ರ ಮೀನುಗಾರಿಕೆಗೆ 10 ದಿನಕ್ಕೆ 6 ಸಾವಿರ ಲೀ. ನಂತೆ ಕನಿಷ್ಠ 4 ಲಕ್ಷ ರೂ. ಮೊತ್ತದ ಡಿಸೇಲ್‌ ವೆಚ್ಚವಾಗುತ್ತದೆ. ಬಲೆ, ಮಂಜುಗಡ್ಡೆ ಹಾಗೂ ಇನ್ನಿತರ ಖರ್ಚು ಬೇರೆ. ಒಟ್ಟು 5 ರಿಂದ 6 ಲಕ್ಷ ರೂ. ಮೌಲ್ಯದ ಮೀನು ಹಿಡಿದರೂ ಬೋಟ್‌ ಮಾಲಕರಿಗೆ ಇದರಿಂದ ಲಾಭವಾಗದು. ಮೀನಿನ ಅಲಭ್ಯತೆಯಿಂದಾಗಿ ಶೇ.50 ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಶೇ. 5ರಷ್ಟು ಬೋಟುಗಳಿಗೆ ಅಲ್ಪ ಪ್ರಮಾಣದಲ್ಲಿ ಮತ್ಸ್ಯ ಸಂಪತ್ತು ಲಭಿಸಿದ್ದರೂ ಉಳಿದೆಲ್ಲ ನಷ್ಟದಲ್ಲಿದೆ.

Advertisement

ಸಬ್ಸಿಡಿ ಹಣಕ್ಕೆ ಕಾದಿದ್ದೇವೆ
ಈಗಾಗಲೇ ಮೀನಿನ ಕ್ಷಾಮದಿಂದಾಗಿ ಸಂಪೂರ್ಣ ನಷ್ಟವನ್ನು ಅನುಭವಿಸಿದೇªವೆ. ಬ್ಯಾಂಕ್‌ ಅಧಿಕಾರಿಗಳು ಮಾರ್ಚ್‌ ವರ್ಷಾಂತ್ಯದ ಕಾರಣ ಒಡ್ಡಿ ಒತ್ತಡವನ್ನು ಹೇರುತ್ತಿದ್ದಾರೆ. ಸಬ್ಸಿಡಿ ಹಣ ಸಿಕ್ಕಿದರೆ ಬ್ಯಾಂಕಿನಲ್ಲಿ ಮಾಡಿದ ಸಾಲದ ಕಂತನ್ನು ತುಂಬಲಾದರೂ ಸಹಕಾರಿಯಾಗಿರುತ್ತಿತ್ತು.
-ಸತೀಶ್‌ ಕುಂದರ್‌ ಮಲ್ಪೆ, ಬೋಟ್‌ ಮಾಲಕರು

ಒಂದೆರಡು ದಿನಗಳಲ್ಲಿ ಸಬ್ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳ ಸಬ್ಸಿಡಿ ಹಣ ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಜನವರಿ ಮತ್ತು ಫೆಬ್ರವರಿಯ ತಿಂಗಳ ಪಟ್ಟಿಯನ್ನು ಕಳುಹಿಸಲಾಗಿದೆ.
-ರಾಮಾಚಾರ್ಯ, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಬೆಂಗಳೂರು (ಮರೈನ್‌)

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next