Advertisement

ಒಬ್ಬರ ರಕ್ತದಿಂದ ನಾಲ್ಕು ಜೀವ ಉಳಿಸಬಹುದು’

11:20 PM Jun 14, 2019 | Sriram |

ಉಡುಪಿ: ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಕನಿಷ್ಠ ನಾಲ್ಕು ಜೀವವನ್ನು ಉಳಿಸಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ಹೇಳಿದರು.


Advertisement

ಅವರು ಶುಕ್ರವಾರ ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಯಲಕ್ಷ್ಮೀ ಸಿಲ್ಕ್ಸ್ ಜಯಲಕ್ಷ್ಮೀ ಆರ್ಕೇಡ್‌ ಉದ್ಯಾವರ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಜ್ಞಾನ ಸಾಧನಾ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯಾವರದ ಜ್ಞಾನ ಸಾಧನಾ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಬೃಹತ್‌ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದಾನಿಗಳು ನೀಡಿದ ರಕ್ತವನ್ನು 35 ದಿನಗಳ ಕಾಲ ಮಾತ್ರ ಸಂಗ್ರಹಿಸಿಡಬಹುದು. ಪ್ಲೇಟ್ಲೆಟ್ಸ್‌ 5 ದಿನಗಳ ಕಾಲ ಮಾತ್ರ ಇಡಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಾವರ ಜ್ಞಾನ ಸಾಧನ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಜೋನ್‌ ಎಂ. ಡಿ’ಸೋಜಾ ಮಾತನಾಡಿ, ರಕ್ತದಾನದಿಂದ ಒಂದು ಜೀವ ಉಳಿಸುವುದೇ ನಾವು ಮಾಡುವ ಶ್ರೇಷ್ಠದಾನ ಎಂದ‌ರು.

ವಾಹನ ಚಾಲನೆ: ಜಾಗರೂಕತೆ ಅಗತ್ಯ
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮ್‌ರಾವ್‌ ಮಾತನಾಡಿ ಆಕ್ಸಿಡೆಂಟ್ ಆದಂತಹ ಸಂದರ್ಭ ಅತೀ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುವುದು. ಆದ್ದರಿಂದ ವಾಹನ ಚಲಾಯಿಸುವಾಗ ಯುವ ಜನತೆ ಜಾಗರೂಕರಾಗಿರಬೇಕು ಎಂದು ಹೇಳಿದರು.

Advertisement

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಎಸ್‌.ವಿ ರಕ್ತದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸಲು ಸಹಕಾರಿಯಾಗಬೇಕು ಎಂದು ರಕ್ತದಾನಿ ಹೆಬ್ರಿಯ ನರಸಿಂಹ ನಾಯಕ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ರಕ್ತದಾನಿಗಳಿಗೆ ಸಮ್ಮಾನದ ಅಗತ್ಯವಿಲ್ಲ, ರಕ್ತದಾನದಿಂದ ಒಂದು ಜೀವ ಉಳಿದರೆ ಅದೇ ರಕ್ತದಾನಿಗೆ ಸನ್ಮಾನ ಎಂದು ರಕ್ತದಾನಿ ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ 6 ಮಂದಿ ದಾನಿಗಳನ್ನು ಸನ್ಮಾನಿಸಲಾಯಿತು. ರಕ್ತದಾನ ಮತ್ತು ಸುರಕ್ಷಿತ ರಕ್ತ ವಿಷಯದ ಕುರಿತು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ವೀಣಾ ಕುಮಾರಿ ವಿಶೇಷ ಉಪನ್ಯಾಸ ಮಾಡಿದರು.

ಉದ್ಯಾವರ ಜ್ಞಾನ ಸಾಧನಾ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಜೆಟಿಒ ನಾಗೇಂದ್ರ ಕುಮಾರ್‌ ಸ್ವಾಗತಿಸಿದರು. ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next