Advertisement

ಸಾರಿಗೆ ಸಂಸ್ಥೆ ಬಸ್‌ ಕಾರಿಗೆ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ

10:47 PM Jan 03, 2020 | Lakshmi GovindaRaj |

ಮುಧೋಳ: ಹೊಸ ವರ್ಷದ ಮೂರನೇ ದಿನವಾದ ಶುಕ್ರವಾರ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಸಾರಿಗೆ ಸಂಸ್ಥೆಯ ಬಸ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಶಿರೋಳ ಬಳಿ ಸಂಭವಿಸಿದೆ. ಮೃತರನ್ನು ಜಮಖಂಡಿ ತಾಲೂಕಿನ ಗೋಠೆ ಗ್ರಾಮದ ಸಿದ್ದರಾಯ ತೇಲಿ (36), ಬಾಲಪ್ಪ ಸೆಂಡಗಿ (33), ರಿಯಾಜ್‌ ಜಾಲಗೇರಿ (25) ಹಾಗೂ ಹನಮಂತ ಗನಗಾರ (21) ಎಂದು ಗುರುತಿಸಲಾಗಿದೆ.

Advertisement

ಧಾರವಾಡದ ಹೈಕೋರ್ಟ್‌ನಲ್ಲಿ ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ಗೋಠೆ ಗ್ರಾಮದಿಂದ ಕಾರಿನಲ್ಲಿ ಹೊರಟಿದ್ದ ನಾಲ್ವರು, ಶಿರೋಳ ಬಳಿ ಎದುರಿಗೆ ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಸ್ವಿಫ್ಟ್‌ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೆಳಗಾವಿಯಿಂದ ಕಲಬುರಗಿಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್‌, ಕಬ್ಬಿನ ಟ್ಯಾಕ್ಟರ್‌ ಹಿಂದಿಕ್ಕಿ ಸಾಗುವ ಭರದಲ್ಲಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಜಮಖಂಡಿ ಡಿವೈಎಸ್ಪಿ ಆರ್‌.ಕೆ.ಪಾಟೀಲ, ಮುಧೋಳ ಸಿಪಿಐ ಎಚ್‌.ಆರ್‌. ಪಾಟೀಲ, ಪಿಎಸ್‌ಐ ಎಸ್‌.ಎಸ್‌.ಘಾಟಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನದಿಯಲ್ಲಿ ಮುಳುಗಿ ನಾಲ್ವರು ಸಾವು
ರಾಯಚೂರು: ಆಂಧ್ರಪ್ರದೇಶದ ಕಡಪ ಜಿಲ್ಲೆ ಸಿದ್ಧಪಟ್ಟಣಂ ಹತ್ತಿರದ ಪೆನ್ನಾ ನದಿಯಲ್ಲಿ ಮುಳುಗಿ ನಗರದ ಮೂವರು ಬಾಲಕಿಯರು ಹಾಗೂ ಅವರ ಸಂಬಂಧಿ  ಮೃತಪಟ್ಟಿದ್ದಾರೆ. ನಗರದ ಮೆಥೋಡಿಸ್ಟ್‌ ಚರ್ಚ್‌ ಸಮೀಪದ ನಿವಾಸಿ ಗೌಸ್‌ ಪಾಷಾ ಅವರ ಮಕ್ಕಳಾದ ಮೆದಿಹಾ (12), ಫರಿಯಾ (10), ಲೋಹಾ (10) ಸಂಬಂಧಿ ಅನ್ವರ್‌ (35) ಸಾವನ್ನಪ್ಪಿದವರು.

ಇವರೆಲ್ಲಾ ಸಂಬಂಧಿಕರ ಮನೆಗೆ ತೆರಳಿದ್ದು, ನದಿಯಲ್ಲಿ ಈಜಾಡಲು ಹೋಗಿದ್ದಾಗ ಮುಳುಗುತ್ತಿದ್ದರು. ಈ ವೇಳೆ ರಕ್ಷಿಸಲು ಹೋದ ಸಂಬಂಧಿ ಅನ್ವರ್‌ (35) ಕೂಡ ದುರ್ಮರಣಕ್ಕೀಡಾಗಿದ್ದಾರೆ. ಬಾಲಕಿಯರ ಮೃತದೇಹಗಳನ್ನು ನಗರಕ್ಕೆ ತಂದಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next