Advertisement

ಕಾಸರಗೋಡಿನ ನಾಲ್ವರು ಐಸಿಸ್‌ ಉಗ್ರರ ಸಾವು

06:00 AM Mar 31, 2018 | Team Udayavani |

ಕಾಸರಗೋಡು: ಐಸಿಸ್‌ಗೆ ಸೇರ್ಪಡೆಗೊಂಡ ಕಾಸರಗೋಡಿನ ನಾಲ್ವರು ಅಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನೆಯ ಬಾಂಬ್‌ ದಾಳಿಗೆ ಬಲಿಯಾಗಿದ್ದಾರೆ. ಕಾಸರಗೋಡು ಪಡನ್ನದ ನಿವಾಸಿಗಳಾದ ಶಿಹಾಬ್‌, ಪತ್ನಿ ಅಜ್ಮಲಾ, ಅವರ ಮಗು ಮತ್ತು ತೃಕ್ಕರಿಪುರದ ಮುಹಮ್ಮದ್‌ ಮನ್ಸಾದ್‌ ಮೃತಪಟ್ಟವರು ಎಂದು ವರದಿಯಾಗಿದೆ. ನಂಗರ ಹಾರ್‌ ಪ್ರದೇಶದ ಐಸಿಸ್‌ ಶಿಬಿರದ ಮೇಲೆ ಅಮೆರಿಕದ ವಾಯುಪಡೆ ನಡೆಸಿದ ಬಾಂಬ್‌ ದಾಳಿಯಲ್ಲಿ ಇವರು ಸಾವಿಗೀಡಾಗಿದ್ದಾರೆ. ಕೇರಳದಿಂದ ನಾಪತ್ತೆಯಾಗಿದ್ದ ಇವರು ಅಫ್ಘಾನ್‌ ತಲುಪಿದ್ದರು.

Advertisement

ಕೇರಳದಿಂದ 22 ಮಂದಿ ಐಸಿಸ್‌ ಸೇರ್ಪಡೆಯಾಗಿದ್ದಾರೆಂದು ಪೊಲೀಸ್‌ ವರದಿ ಮಾಡಿತ್ತು. ಕೇರಳದಲ್ಲಿ ಐಸಿಸ್‌ ಚಟುವಟಿಕೆ ನೇತೃತ್ವ ವಹಿಸಿದ್ದ ಶಜೀರ್‌ ಮಂಗಲಶೆರಿ ಸಹಿತ 14 ಮಂದಿ ಕಳೆದ ವರ್ಷ ಸಿರಿಯಾದಲ್ಲಿ ಸೇನೆ ಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾಗಿದ್ದರು ಎಂದು ರಹಸ್ಯ ತನಿಖಾ ವಿಭಾಗ ಖಚಿತಪಡಿಸಿತ್ತು. ಕಾಸರಗೋಡಿನ ನಿವಾಸಿಗಳನ್ನು ಐಸಿಸ್‌ ಕೇಂದ್ರಕ್ಕೆ ತಲುಪಿಸಲು ನೆರವಾದ ಪ್ರಕರಣದಲ್ಲಿ ಬಿಹಾರ್‌ ನಿವಾಸಿ ಯಾಸ್ಮಿನ್‌ ಅಹಮ್ಮದ್‌ಗೆ ಎನ್‌ಐಎ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿತ್ತು. 2016ರ ಜು.30ರಂದು ಪುತ್ರನೊಂದಿಗೆ ವಿದೇಶಕ್ಕೆ ಪಲಾಯನಗೈಯಲು ಯತ್ನಿಸುತ್ತಿದ್ದಾಗ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾಸ್ಮಿನ್‌ಳನ್ನು ಬಂಧಿಸಲಾಗಿತ್ತು.

ಕಾಸರಗೋಡು ನಿವಾಸಿಗಳಾದ 15 ಮಂದಿ ಯನ್ನು ಭಯೋತ್ಪಾದಕ ಸಂಘಟನೆಯಾದ ಐಸಿಸ್‌ಗೆ ಸೇರ್ಪಡೆಗೊಳಿಸಲು ವಿದೇಶಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಯಾಸ್ಮಿನ್‌ ವಿರುದ್ಧ ಕೇಸು ದಾಖಲಿಸಲಾಗಿತ್ತು. ನಿಗೂಢ ರೀತಿಯಲ್ಲಿ ಕಾಸರಗೋಡಿನ ತೃಕ್ಕರಿಪುರದಿಂದ ನಾಪತ್ತೆಯಾಗಿದ್ದವರಲ್ಲಿದ್ದ ಅಬ್ದುಲ್‌ ರಶೀದ್‌ ಅಬ್ದುಲ್ಲನೊಂದಿಗೆ ಯಾಸ್ಮಿನ್‌ ನಿಕಟ ಸಂಪರ್ಕ ವಿತ್ತೆಂದು ತನಿಖೆಯಿಂದ ತಿಳಿದು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next