Advertisement

ಶಿರ್ವ: ನಾಲ್ವರು ಅಂತರ್‌ರಾಜ್ಯ ಕಳ್ಳರ ಬಂಧನ

07:23 PM Nov 16, 2022 | Team Udayavani |

ಶಿರ್ವ: ಗ್ರಾಹಕರ ಸೋಗಿನಲ್ಲಿ ಜುವೆಲ್ಲರಿ ಶಾಪ್‌ಗೆ ತೆರಳಿ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯ ಶನಾಬೆಲ್ಲಾ ಬಿ.(45), ಮೊಹಮ್ಮದ್‌ ಆಲಿ (32), ಅಶುರ್‌ ಆಲಿ (32)ಮತ್ತು ಗಣೇಶ್‌ ಕುಮಾರ್‌ ಬಂಧಿತರು. ಬಂಧಿತರಿಂದ ರೂ. 1,49,000 ಮೌಲ್ಯದ 28.882 ಗ್ರಾಂ ತೂಕದ ಚಿನ್ನದ ಗಟ್ಟಿ, ರೂ. 1,17,000 ಮೌಲ್ಯದ 26 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಮೋಟಾರ್‌ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದು ಕಳವು : 

ಮಲೆಯಾಳ ಮತ್ತು ತಮಿಳಿನಲ್ಲಿ ಮಾತನಾಡುತ್ತಿದ್ದ ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಜುವೆಲರ್‌ ಅಂಗಡಿಗೆ ಬಂದು ಜೂ. 6ರಂದು ಮಧ್ಯಾಹ್ನ 1.49 ಲ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಲೆಸ್‌ ಕಳವು ಮಾಡಿದ್ದರು.

ಮಾಲಕರು ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಅಪರಿಚಿತ ಗ್ರಾಹಕರು ಚಿನ್ನದ ನೆಕ್ಲೆಸನ್ನು ಕಳ್ಳತನ ಮಾಡುವ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಅದರಂತೆ ಕೆ.ವಿವೇಕಾನಂದ ಆಚಾರ್ಯ ಜೂ. 9ರಂದು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

ಪ್ರಕರಣದ ತನಿಖೆ ಪ್ರಾರಂಭಿಸಿದ ಶಿರ್ವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಮಂಗಳೂರಿನ ವಸತಿಗೃಹದಲ್ಲಿ ತಂಗಿದ್ದ ಆರೋಪಿ ಶನಾಬೆಲ್ಲಾನ ಮೊಬೈಲ್‌ ನಂಬರ್‌ ಸಿಕ್ಕಿತ್ತು. ಆಗ ತೋರಿಸಿದ ಮೊಬೈಲ್‌ ಟವರ್‌ ಲೊಕೇಶನ್‌ನಂತೆ ಪೊಲೀಸರು ತಮಿಳುನಾಡಿನ ದಿಂಡಿಗಲ್‌, ಸಂಪಟಿ, ಪುನ್‌ಚೋಲೈ ಮುಂತಾದ ಕಡೆ ತೆರಳಿ ಮೊಬೈಲ್‌ ಲೊಕೇಶನ್‌ ಮಾಹಿತಿ ಕಲೆ ಹಾಕಿದಾಗ ಆರೋಪಿ ಮಂಗಳೂರಿನ ಉಳ್ಳಾಲದಲ್ಲಿರುವುದು ಕಂಡುಬಂತು.

ಪೊಲೀಸರು ಉಳ್ಳಾಲದ ಲಾಡ್ಜ್ ಗೆ ದಾಳಿ ನಡೆಸಿ ರೂಮಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿರ್ವ ಮತ್ತು ಮೂಡುಬಿದಿರೆಯ ಜುವೆಲ್ಲರಿಯಲ್ಲಿ ಕಳವು ಮಾಡಿದ ಆರೋಪಿಗಳ ಪತ್ತೆಯಾಗಿತ್ತು. ಆರೋಪಿಗಳ ಪೈಕಿ ಶನಾಬೆಲ್ಲಾ ಕಳವು ಮಾಡಿದ್ದ ಸೊತ್ತುಗಳನ್ನು ತಮಿಳುನಾಡಿನ ಚಿನ್ನಾಲಪಟ್ಟಿಯ ಜುವೆಲ್ಲರಿ ಶಾಪ್‌ಗೆ ಮಾರಾಟ ಮಾಡಿದ್ದು, ಬಂದ ಹಣವನ್ನು ಸಮಾನವಾಗಿ ಹಂಚಿಕೊಂಡು ಖರ್ಚು ಮಾಡಿದ್ದರು. ಆರೋಪಿಗಳು ಅಂತಾರಾಜ್ಯ ಕಳ್ಳರಾಗಿದ್ದು, ಮೂಡುಬಿದಿರೆ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಹಾಕೆ ಅಕ್ಷಯ್‌ ಮಚ್ಚೀಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌.ಟಿ. ಸಿದ್ಧಲಿಂಗಪ್ಪ ಮತ್ತು ಕಾರ್ಕಳ ಉಪವಿಭಾಗದ ಪೊಲೀಸ್‌ ಅಧೀಕ್ಷಕ ವಿಜಯಪ್ರಸಾದ್‌ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಅವರ ನೇತೃತ್ವದಲ್ಲಿ ಶಿರ್ವ ಪಿಎಸ್‌ಐ ರಾಘವೇಂದ್ರ ಸಿ., ಎಎಸ್‌ಐ ವಿವೇಕಾನಂದ ಬಿ. ಮತ್ತು ಸಿಬಂದಿಗಳಾದ ಕಿಶೋರ್‌ ಕುಮಾರ್‌, ರಘು, ಅಖಿಲ್‌ ಹಾಗೂ ಕಾರ್ಕಳ ಉಪ ವಿಭಾಗದ ಉಪಾಧೀಕ್ಷಕರ ಕಚೇರಿಯ ಸಿಬಂದಿ ಶಿವಾನಂದ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next