ಅಮರಾವತಿ : ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಾಡು ಗ್ರಾಮದಲ್ಲಿ ಇಂದು ಬೆಳಗ್ಗೆ ರಾಜ್ಯ ಸರಕಾರಿ ಸಾರಿಗೆ ಬಸ್ಸೊಂದು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮತ್ತು ಓರ್ವ ಆಟೋ ಡ್ರೈವರ್ ಸ್ಥಳದಲ್ಲೇ ಮೃತಪಟ್ಟು ಇತರ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡರು.
ದಟ್ಟನೆಯ ಮಂಜು ಮುಸುಕಿದ ರಸ್ತೆಯಲ್ಲಿ ಶ್ರೀಶೈಲಂ ಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್ಸು ವಿದ್ಯಾರ್ಥಿಗಳನ್ನು ಶಾಲೆಗೆ ಒಯ್ಯುವ ಆಟೋ ರಿಕ್ಷಾಗೆ ಮುಖಾಮುಖೀ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೇರಚೇರ್ಲಾ ಎಂಬಲ್ಲಿನ ತಮ್ಮ ಶಾಲೆಗೆ ಎಂದಿನಂತೆ ರಿಕ್ಷಾದಲ್ಲಿ ನತದೃಷ್ಟ ವಿದ್ಯಾರ್ಥಿಗಳು ಹೋಗುತ್ತಿದ್ದಾಗ ಈ ದಾರುಣ ಅವಘಡ ಸಂಭವಿಸಿತು. ದಟ್ಟನೆಯ ಮಂಜಿನಿಂದಾಗಿ ಗೋಚರಣೆ ತುಂಬಾ ಕ್ಷೀಣವಾಗಿತ್ತು. ಮೇಲಾಗಿ ಈ ತಾಣವು ಅಪಘಾತಗಳ ವಲಯವೆಂಬ ಕುಖ್ಯಾತಿಯನ್ನೂ ಪಡೆದಿತ್ತು.
ಮೃತ ವಿದ್ಯಾರ್ಥಿಗಳೆಲ್ಲರೂ ವೇಮಾವರಂ ಗ್ರಾಮದವರು. ಅವರನ್ನು ಗಾಯತ್ರಿ, ರೇಣುಕಾ, ಶೈಲಜಾ ಮತ್ತು ಕಾರ್ತಿಕ್ ರೆಡ್ಡಿ ಎಂದು ಗುರುತಿಸಲಾಗಿದೆ. ಆಟೋ ಡ್ರೈವರ್ ಹೆಸರು ಧನರಾಜ್ ಎಂದು ಗೊತ್ತಾಗಿದೆ.
ಗಾಯಾಳುಗಳಾಗಿರುವ ಇತರ ಮೂವರು ವಿದ್ಯಾರ್ಥಿಗಳನ್ನು ಗುಂಟೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವರ ಕಾರ್ಯಾಲಯ ತಿಳಿಸಿದೆ.
ಸಮಾಜ ಕಲ್ಯಾಣ ಸಚಿವ ನಕ್ಕಾ ಆನಂದ ಬಾಬು ಅವರು ನರಸರಾವ್‌ಪೇಟೆಯಲ್ಲಿನ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳ ಪಾರ್ಥಿವ ಶರೀರವನ್ನು ಈ ಆಸ್ಪತ್ರೆಗೆ ತರಲಾಗಿದೆ.
ಅಸೆಂಬ್ಲಿ ಸ್ಪೀಕರ್ ಕೊಡೆಲಾ ಶಿವಪ್ರಸಾದ ರಾವ್, ಮಾನವ ಸಂಪನ್ಮೂಲ ಸಚಿವ ಗಂಟಾ ಶ್ರೀನಿವಾಸ್ ರಾವ್ ಮತ್ತು ಆರೋಗ್ಯ ಸಚಿವ ಕಮಿನೇನಿ ಶ್ರೀನಿವಾಸ್ ಅವರು ವಿದ್ಯಾರ್ಥಿಗಳ ಸಾವಿಗೆ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.