ತಿರುಪತಿ: ಆಂಧ್ರಪ್ರದೇಶಕ್ಕೆ ರಾಜಧಾನಿ ಅಮರಾವತಿ ಬದಲಾಗಿ ನಾಲ್ಕು ರಾಜಧಾನಿ ಮಾಡುವ ಉದ್ದೇಶವನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಹೊಂದಿದ್ದಾರೆ. ವಿಜಯನಗರ, ಕಾಕಿನಾಡ, ಗುಂಟೂರು ಮತ್ತು ಕಡಪಾ ನಗರಗಳಿಗೆ ಈ ಮಾನ್ಯತೆ ನೀಡುವ ಇರಾದೆಯಲ್ಲಿದ್ದಾರೆ. ಹೀಗೆಂದು ಹೇಳಿರುವುದು ಬಿಜೆಪಿ ರಾಜ್ಯಸಭಾ ಸದಸ್ಯ ಟಿ.ಜಿ.ವೆಂಕಟೇಶ್. ಆಂಧ್ರಕ್ಕೆ 4 ರಾಜಧಾನಿ ಸ್ಥಾಪಿಸುವ ಕುರಿತ ತಮ್ಮ ನಿರ್ಧಾರವನ್ನು ಜಗನ್ ರೆಡ್ಡಿ, ಕೇಂದ್ರ ಸರಕಾರಕ್ಕೂ ಮಾಹಿತಿ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಆಡಳಿತ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ವೇಳೆ ಅಮರಾವತಿಯಲ್ಲಿ ರಾಜಧಾನಿ ನಿರ್ಮಾಣ ಮಾಡುವ ಕಾಮಗಾರಿ ಶುರು ಮಾಡ ಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಸೋತು, ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಾಯ್ಡು ಸರಕಾರದ ಯೋಜನೆ ಕೈಬಿಡಲಾಗಿತ್ತು. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಟಿಡಿಪಿ-ವೈಎಸ್‌ಆರ್ ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯತ್ತಿದೆ.