ಚಾಮರಾಜನಗರ: ಆನೆ ದಂತ ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಅಂತರ್ಜಾಲ, ಆರ್ಥಿಕ, ಮಾದಕ ವಸ್ತುಗಳ ಅಪರಾಧ (ಸೆನ್) ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಶಿವಶಂಕರ್, ಸುರೇಶ್, ಗುಂಡ್ಲುಪೇಟೆ ತಾಲೂಕಿನ ಅನಿಲ್, ರಘು ಬಂಧಿತ ಆರೋಪಿಗಳು. ಇವರನ್ನು ಬಂಧಿಸಿ 2 ಕೆಜಿ ಆನೆದಂತವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಚೀಲವೊಂದರಲ್ಲಿ ಎರಡು ಆನೆ ದಂತಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರ ಮಾರ್ಗದರ್ಶನದಲ್ಲಿ ಸೆನ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್ ತಂಡ ತಾಲೂಕಿನಹರದನಹಳ್ಳಿ ಗ್ರಾಮದ ಬಳಿ ಆರೋಪಿಗಳಿಗೆ ಬಲೆ ಬೀಸಿತು.
ಬೈಕ್‌ಗಳಲ್ಲಿ ಚಲಿಸುತ್ತಿದ್ದ ಇವರು, ಪೊಲೀಸರ ಜೀಪ್ ಕಂಡೊಡನೆ ಅನುಮಾನಾಸ್ಪದವಾಗಿ ವರ್ತಿಸತೊಡಗಿದರು. ಇವರನ್ನು ಬಂಧಿಸಿ ಪರಿಶೀಲಿಸಿದಾಗ ಚೀಲದಲ್ಲಿ ಆನೆ ದಂತಗಳು ದೊರೆತವು.
ಇದನ್ನೂ ಓದಿ : ಮೋದಿ ಸರಕಾರ ಮಾಡಿದ ಪ್ರತಿಯೊಂದು ಕೆಲಸವು ಜನಪರವಾಗಿರುತ್ತದೆ: ಅರವಿಂದ ಲಿಂಬಾವಳಿ
ಈ ದಂತಗಳು 2 ಕೆಜಿ ತೂಕವಿದ್ದು, ಆರೋಪಿಗಳನ್ನು ಬಂಧಿಸಿ ಪೂರ್ವ ಠಾಣೆ ಪೊಲೀಸರಲ್ಲಿಗೆ ಹಸ್ತಾಂತರ ಮಾಡಲಾಗಿದೆ ಎಂದು ಇನ್‌ಸ್ಪೆಕ್ಟರ್ ಸಹದೇವ್ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸ್ವಾಮಿ, ಜಗದೀಶ್, ರಾಮು, ಮಲ್ಲಿಕ್, ಶಶಿಧರಮೂರ್ತಿ, ಮಂಜುನಾಥ್, ಪ್ರಸಾದ್, ನವೀನ್, ಸಿದ್ದರಾಜೇಗೌಡ ಪಾಲ್ಗೊಂಡಿದ್ದರು.