Advertisement

ಜಾಗತಿಕ ಸಮಸ್ಯೆಗೆ ಪರಿಹಾರವೇ ಶ್ರದ್ಧಾಂಜಲಿ

01:14 AM Jan 18, 2022 | Team Udayavani |

ಮಣಿಪಾಲ: ಜಲಕ್ಷಾಮ, ಹವಾಮಾನ ವೈಪರೀತ್ಯ, ಇಂಧನವೇ ಮೊದಲಾದ ಜಾಗತಿಕ ಸಮಸ್ಯೆಗಳಿಗೆ ಮಣಿಪಾಲವು ಪರಿಹಾರ ಸೂಚಕ ಕೇಂದ್ರವಾಗಬೇಕು. ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಕಾಲಘಟ್ಟದಲ್ಲಿ ಇದುವೇ ಟಿ.ಎ. ಪೈಯವರಿಗೆ ಸಲ್ಲಿಸಬಹುದಾದ ಸರ್ವಶ್ರೇಷ್ಠ ಶ್ರದ್ಧಾಂಜಲಿಯಾಗಿದೆ ಎಂದು ಸೆಲ್ಕೊ ಸೋಲಾರ್‌ ಲೈಟ್ಸ್‌ ಪ್ರೈ.ಲಿ. ಸ್ಥಾಪಕ ಮತ್ತು ಅಧ್ಯಕ್ಷ ಡಾ| ಹರೀಶ ಹಂದೆ ಅಭಿಪ್ರಾಯಪಟ್ಟರು.

Advertisement

ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಮತ್ತು ಮಾಹೆ ವಿ.ವಿ. ಸೋಮ ವಾರ ವ್ಯಾಲಿವ್ಯೂ ಹೊಟೇಲ್‌ ಸಭಾಂಗಣದಲ್ಲಿ ಆಯೋಜಿಸಿದ ಸ್ಥಾಪಕರ ದಿನದಂದು 39ನೇ ಟಿ.ಎ. ಪೈ ಸ್ಮಾರಕ ಉಪನ್ಯಾಸ ನೀಡಿ ಡಾ| ಹಂದೆ ಮಾತನಾಡಿದರು.

ದಶಕಗಳ ಹಿಂದೆಯೇ ಬಯೋ ಗ್ಯಾಸ್‌ಗೆ ಉತ್ತೇಜನ ನೀಡಿದ ಟಿ.ಎ. ಪೈಯವರು ಕೊರೊನಾ ಕಾಲಘಟ್ಟದಲ್ಲಿ ಉದ್ಭವವಾದ ಸಮಸ್ಯೆಗಳಿಗೆ ಮಾರ್ಗದರ್ಶಕರಾಗಿ ಕಂಡುಬರುತ್ತಾರೆ. ಕೊರೊನಾದಿಂದ 16 ಕೋಟಿ ಜನರು ಬಡತನ ರೇಖೆಯಡಿಗೆ ಬಂದಿದ್ದಾರೆ. ಪೈ ಯವರ “ಇನ್‌ಕ್ಲೂಸಿವ್‌’ (ಎಲ್ಲರನ್ನೂ ಒಳಗೊಳಿಸುವ) ನೀತಿಯ ನಾಯಕತ್ವ ಇಂದು ಅಗತ್ಯವಾಗಿದೆ. ಇದುವೇ ರಾಷ್ಟ್ರದ ಆಸ್ತಿ ನಿರ್ಮಿಸುವ ಕ್ರಮ ಎಂದು ಡಾ| ಹಂದೆ ಹೇಳಿದರು.

ಬ್ರೆಜಿಲ್‌ನಂತಹ ರಾಷ್ಟ್ರಗಳಲ್ಲಿ ನಗರೀಕರಣವೇ ಕ್ರಿಮಿನಲ್‌ಗ‌ಳನ್ನು ಸೃಷ್ಟಿಸಿದೆ. ಮಣಿಪುರದಲ್ಲಿ 100 ಕಿ.ಮೀ.ಗೂ ಒಂದು ಬ್ಯಾಂಕ್‌ ಸಿಗುತ್ತಿಲ್ಲ. ಅಸ್ಸಾಂನ ಭತ್ತದ ಉತ್ಪಾದನತಜ್ಞ ಬೆಂಗಳೂರಿನಲ್ಲಿ ಇನ್ನೇನೋ ಮಾಡುತ್ತಿದ್ದಾನೆ. ಇಥಿಯೋಪಿಯಾ, ತಾಂಜಾನಿಯಾದಲ್ಲಿ ನೀರಿನ ಬರ ಕಾಣುತ್ತಿದೆ. ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗುವಂತಾಗಬೇಕು. ವಿಶ್ವ ಸಂಸ್ಥೆ 2030ರಲ್ಲಿ ಗುರಿ ಇರಿಸಿಕೊಂಡ “ಎಸ್‌ಜಿಎಸ್‌’ ಸುಸ್ಥಿರ ಅಭಿವೃದ್ಧಿ ನೀತಿಯಲ್ಲಿ ಹವಾಮಾನ ಬದಲಾವಣೆ, ಇಂಧನ, ಬರವೇ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟ್ಯಾಪ್ಮಿ, ಮಾಹೆ, ಭಾರತೀಯ ವಿಕಾಸ ಟ್ರಸ್ಟ್‌ ಗಳು ಮುಂದಾಗಿ ಮಣಿಪಾಲವು ಸಾಮಾಜಿಕ ಉದ್ಯಮಶೀಲರ ರಾಜಧಾನಿಯಾಗಬೇಕು ಎಂದು ಡಾ| ಹಂದೆ ಆಶಿಸಿದರು.

ಕರಾವಳಿಯ ಹೈನುಕ್ರಾಂತಿ
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅವರು ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಟಿ.ಎ. ಪೈಯವರ ಕಾಳಜಿಯಿಂದಾಗಿಯೇ ಕ್ಷೀರ ಕ್ಷಾಮವಿದ್ದ ಕರಾವಳಿ ಜಿಲ್ಲೆಗಳಲ್ಲೀಗ ನಿತ್ಯ 6 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಲಾಭದಲ್ಲಿ, ಗುಣಮಟ್ಟದಲ್ಲಿ ದ.ಕ. ಹಾಲು ಒಕ್ಕೂಟ ಮುಂಚೂಣಿಯಲ್ಲಿರಲು ಕೆನರಾ ಮಿಲ್ಕ್ ಯೂನಿಯನ್‌ ಮೂಲಕ ಪೈಯವರು ಹಾಕಿಕೊಟ್ಟ ಭದ್ರ ಬುನಾದಿ ಕಾರಣ ಎಂದು ಬೆಟ್ಟು ಮಾಡಿದರು.

Advertisement

ಅಂಚೆ ಲಕೋಟೆ ಬಿಡುಗಡೆ
ಜನ್ಮ ಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ ವಿಶೇಷ ಲಕೋಟೆ ಮತ್ತು ಅಂಚೆ ಚೀಟಿಯನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌ ಅವರು ಬಿಡುಗಡೆಗೊಳಿಸಿದರು.

ಸ್ಮರಣೀಯ ವ್ಯಕ್ತಿ
ಮಹಿಳಾ ಸಶಕ್ತೀಕರಣ, ಕೃಷಿ ಸಾಲ, ಧೀರೂಭಾಯಿ ಅಂಬಾನಿ, ಪಾಟೀಲ ಪುಟ್ಟಪ್ಪನಂತಹವರಿಗೆ ಸಾಲ ನೀಡಿಕೆಯಲ್ಲಿ ತೋರಿದ ಮಾನವೀಯ ನಿಲುವುಗಳಲ್ಲಿ ಟಿ.ಎ. ಪೈ ಅಗ್ರಣಿಯಾಗಿ ಕಂಡುಬರುತ್ತಾರೆ. ಇದರ ಜತೆ ಅವರು ಉಡುಪಿ ಲಯನ್ಸ್‌ ಕ್ಲಬ್‌ ಅಧ್ಯಕ್ಷರೂ ಆಗಿದ್ದರು. ಮುಂದಿನ ಪೀಳಿಗೆ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಇಂತಹ ವ್ಯಕ್ತಿಗಳು ಶತಮಾನಕ್ಕೆ ಒಮ್ಮೆ ಜನಿಸುತ್ತಾರೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಬಣ್ಣಿಸಿದರು.

ಟಿ.ಎ. ಪೈಯವರು ದೂರದೃಷ್ಟಿ ಯಿಂದ ಆರಂಭಿಸಿದ ಟ್ಯಾಪ್ಮಿ ಮುಂಚೂಣಿ ಬಿ ಸ್ಕೂಲ್‌ಗ‌ಳಲ್ಲಿ ಒಂದಾಗಿದೆ ಎಂದು ಮಾಹೆ ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್‌ ಹೇಳಿದರು.


ಮಂಗಳೂರು ಕೆಎಂಸಿ ಪ್ರಾಧ್ಯಾಪಕ ಡಾ| ಲಕ್ಷ್ಮಣ ಪ್ರಭು ಟಿ.ಎ. ಪೈಯವರ ಸಂಸ್ಮರಣೆ ಮಾಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಪೈ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ, ಬಿವಿಟಿ ನಿರ್ವಾಹಕ ವಿಶ್ವಸ್ಥ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು. ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಶೈಕ್ಷಣಿಕ ಡೀನ್‌ ಡಾ| ವಿಶ್ವನಾಥನ್‌ ಅಯ್ಯರ್‌ ಕಾರ್ಯಕ್ರಮ ನಿರ್ವಹಿಸಿ, ಅಸೋಸಿಯೇಟ್‌ ಡೀನ್‌ ಡಾ| ಸುಧೀಂದ್ರ ವಂದಿಸಿದರು. ಟ್ಯಾಪ್ಮಿ ಸಿಬಂದಿ ಡಾ| ಸುಲಗ್ನಾ ಮುಖರ್ಜಿ, ಡಾ| ಅನಿಮೇಶ ಬಹದೂರ್‌, ಸುಧಾ ಭಟ್‌, ನಾರಾಯಣ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next