Advertisement

ಜೀವನೋತ್ಸಾಹದ ಕರ್ಮಯೋಗಿ ಐಡಿಯಲ್‌ ಐಸ್‌ ಕ್ರೀಂ ಸಂಸ್ಥಾಪಕ ದಿ|ಎಸ್‌. ಪ್ರಭಾಕರ ಕಾಮತ್‌

03:16 PM Nov 15, 2021 | Team Udayavani |
ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸ್‌ಕ್ರೀಂ ಸ್ಪರ್ಧೆ ನಡೆದಿತ್ತು. ಅಲ್ಲಿ ಬ್ರ್ಯಾಂಡ್‌ ಹೆಸರನ್ನು ಉಲ್ಲೇಖೀಸದೆ ತೀರ್ಪುಗಾರರಿಗೆ ಕೇವಲ ವಿವಿಧ ಸಂಸ್ಥೆಗಳ ಐಸ್‌ ಕ್ರೀಂಗಳನ್ನು ನೀಡಲಾಗಿತ್ತು. ಅಲ್ಲಿ ಐಡಿಯಲ್‌ ಐಸ್‌ ಕ್ರೀಂನ ವೆನಿಲ್ಲಾ ಮಾದರಿಯು ಭಾರತದ ಸರ್ವಶ್ರೇಷ್ಠ ವೆನಿಲ್ಲಾ ಐಸ್‌ ಕ್ರೀಂ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು.
Now pay only for what you want!
This is Premium Content
Click to unlock
Pay with

ಮಂಗಳೂರಿನ ಐಡಿಯಲ್‌ ಐಸ್‌ ಕ್ರೀಂ ವೈವಿಧ್ಯಗಳು ಈಗ ಜಗತ್ಪ್ರಸಿದ್ದ ಬ್ರ್ಯಾಂಡ್‌ಗಳಾಗಿ ರೂಪುಗೊಂಡಿದ್ದರೆ ಅದಕ್ಕೆ ಕಾರಣಕರ್ತರು ಐಡಿಯಲ್‌ ಐಸ್‌ ಕ್ರೀಮ್ಸ್‌ ಸಂಸ್ಥಾಪಕ ಎಸ್‌. ಪ್ರಭಾಕರ ಕಾಮತ್‌ ಅವರು. ಕಾಮತ್‌ ಅವರು 79ರ ಹರೆಯದಲ್ಲಿ ನಮ್ಮನ್ನು ಅಗಲಿದರು. ಅಲ್ಲಿಯವರೆಗೂ ಕೂಡ ಅವರು ಜೀವನೋತ್ಸಾಹದ ಪ್ರತೀಕವಾಗಿದ್ದರು. ತಮ್ಮ ವ್ಯವಹಾರದ ಕರ್ತವ್ಯ ಮುಗಿಸಿ ಅಂದು ಕೂಡ ಅವರು ಮನೆಯತ್ತ ತೆರಳುತ್ತಿದ್ದರು. ಆದರೆ ಅವರನ್ನು ವಿಧಿ ನಮ್ಮಿಂದ ದೂರ ಸೆಳೆಯಿತು.

Advertisement

“ಐಡಿಯಲ್‌’ ಎಂಬ ಒಂದು ಬ್ರ್ಯಾಂಡ್‌ ಅಥವಾ ಐಕಾನ್‌ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು. ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಅತ್ಯಂತ ನಿಕಟವಾಗಿ, ಅವರ ಅಭಿಮಾನಿಯಾಗಿ, ಗ್ರಾಹಕನಾಗಿ, ಎಳೆಯ ಮಿತ್ರನಾಗಿ, ವಿವಿಧ ಸಂಘಟನೆಗಳಲ್ಲಿ ಸಹವರ್ತಿಯಾಗಿ ನಾನು ಅವರನ್ನು ಬಲ್ಲವನಾಗಿದ್ದೇನೆ. ಅವರ ಜತೆಗಿನ ಪ್ರತೀ ಭೇಟಿಯು ಅವರ ಸಂಸ್ಥೆಯ ಬಗೆಬಗೆಯ ಐಸ್‌ಕ್ರೀಂ ಆಸ್ವಾದಿಸಿದಷ್ಟೇ ಚೇತೋ ಹಾರಿಯಾಗಿರುತ್ತಿತ್ತು. ಇವತ್ತು ಐಡಿಯಲ್‌ ಎಂಬ ಐಸ್‌ ಕ್ರೀಂ ಉತ್ಪನ್ನ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ ಸರ್ವರಿಗೂ ಪ್ರಿಯವಾದ ಉತ್ಪನ್ನ. ಅವರು ಇಷ್ಟೊಂದು ಬಗೆಬಗೆಯ ಐಸ್‌ ಕ್ರೀಂ ಉತ್ಪನ್ನಗಳನ್ನು ನೀಡುತ್ತಾ ಬಂದಿದ್ದರೂ ಎಂದೂ ಕೂಡ ಅದರ ಬೆಲೆಯನ್ನು ಏರಿಸಿದವರಲ್ಲ. ಅತೀ ಕನಿಷ್ಠ ಲಾಭಾಂಶ ಇರಿಸಿಕೊಂಡು ಅದನ್ನವರು ಸಮಾಜಮುಖೀ ಚಟುವಟಿಕೆಗಳಿಗೆ ವ್ಯಯಿಸುತ್ತಾ ಬಂದಿದ್ದರು. ಸಮಾಜದ ಅಗತ್ಯಗಳಿಗೆ ಮತ್ತು ಸಂಘ ಸಂಸ್ಥೆಗಳ ಪಾಲಿಗೆ ಅವರು ಕೊಡುಗೈ ದಾನಿಯಾಗಿದ್ದರು. ಆದರೆ ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಗೆ ತಿಳಿಯಬಾರದು ಎಂಬ ಧೋರಣೆ ಅವರದ್ದಾಗಿತ್ತು. ಎಂದೂ ಕೂಡ ಅವರು ತಮ್ಮ ಬಗ್ಗೆ ಬೀಗಿದವರಲ್ಲ, ತಮ್ಮ ಬಗ್ಗೆ ಎಂದೂ ಏನೂ ಹೇಳಿಕೊಂಡವರಲ್ಲ. ಕಾಯಕವೇ ಅವರ ಉಸಿರಾಗಿತ್ತು. ಹಾಗಾಗಿ ಐಡಿಯಲ್‌ ಐಸ್‌ಕ್ರೀಂ ಜನಪ್ರಿಯವಾಯಿತು. ಅವರು ಆಗಾಗ ಗ್ರಾಹಕರ ಜತೆ ಸಂವಹನವನ್ನು ನಡೆಸುತ್ತಾ ಹೊಸ ಖಾದ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಈ ಮೂಲಕ ವರ್ಷಕ್ಕೆ ಕನಿಷ್ಠ ಒಂದೆರಡು ಹೊಸ ರುಚಿಯ ಐಸ್‌ಕ್ರೀಂನ ತಯಾರಿಗೆ ಮುಂದಾಗುತ್ತಿದ್ದರು.

ಜಗದ್ವಿಖ್ಯಾತವಾಗಿರುವ ಐಡಿಯಲ್‌ ಐಸ್‌ ಕ್ರೀಂನ ಗಡ್‌ಬಡ್‌ ಬ್ರ್ಯಾಂಡ್‌ನ‌ ನಿರ್ಮಾತೃ ಕೂಡ ಅವರೇ. ಈ ಗಡ್‌ಬಡ್‌ ಎಂಬುದು ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ಮಂಗಳೂರಿಗೆ ಹೊರಡುವವರೆಲ್ಲ ಅದನ್ನು ಉಲ್ಲೇಖೀಸದೆ ಇರಲಾರರು. ಅವರ ಇನ್ನೊಂದು ದೊಡ್ಡ ಗುಣವೆಂದರೆ ಗ್ರಾಹಕರ ಜತೆಗಿನ ಸಂಬಂಧ ಹಾಗೂ ತನ್ನ ಸಿಬಂದಿಯ ಬಗೆಗಿನ ಪ್ರೀತಿ ಮತ್ತು ಕಾಳಜಿ. ಸರಿಸುಮಾರು ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರ ವೃಂದವನ್ನು ಸಂಸ್ಥೆ ಹೊಂದಿದೆ. ಐಡಿಯಲ್‌ಗೆ ಹೋದಾಗ ಆ ಸಿಬಂದಿ “ಸರ್‌, ಕಳೆದ ಬಾರಿ ನೀವು ಈ ರುಚಿ ಇಷ್ಟಪಟ್ಟಿದ್ದೀರಿ. ಈ ಬಾರಿ ಇನ್ನೊಂದು ಹೊಸ ರುಚಿ ಸೇರ್ಪಡೆಯಾಗಿದೆ’ ಎಂದು ಆತ್ಮೀಯವಾಗಿ ಹೇಳುವಾಗ ನಮಗೆ ಮನೆ ಮಂದಿಯೊಂದಿಗೆ ಇರುವಂತಹ ಅಥವಾ ಮನೆಗೇ ಬಂದಂತಹ ಅನುಭವವಾಗುತ್ತದೆ. ಹೀಗೆ ಈ ಸೇವಾ ವ್ಯವಸ್ಥೆ , ವೈವಿಧ್ಯಮಯ ರುಚಿ, ಹೊಸತನಗಳ ಸೇರ್ಪಡೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಗಳು ಮತ್ತು ಪರಿಪೂರ್ಣವಾಗಿ-ಸರ್ವಶ್ರೇಷ್ಠ ಗುಣಮಟ್ಟದ ಪಾಲನೆ ಅವರ ನಿರಂತರ ಔದ್ಯಮಿಕ ಯಶಸ್ಸಿನ ಹಿನ್ನೆಲೆ.

ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸ್‌ಕ್ರೀಂ ಸ್ಪರ್ಧೆ ನಡೆದಿತ್ತು. ಅಲ್ಲಿ ಬ್ರ್ಯಾಂಡ್‌ ಹೆಸರನ್ನು ಉಲ್ಲೇಖೀಸದೆ ತೀರ್ಪುಗಾರರಿಗೆ ಕೇವಲ ವಿವಿಧ ಸಂಸ್ಥೆಗಳ ಐಸ್‌ ಕ್ರೀಂಗಳನ್ನು ನೀಡಲಾಗಿತ್ತು. ಅಲ್ಲಿ ಐಡಿಯಲ್‌ ಐಸ್‌ ಕ್ರೀಂನ ವೆನಿಲ್ಲಾ ಮಾದರಿಯು ಭಾರತದ ಸರ್ವಶ್ರೇಷ್ಠ ವೆನಿಲ್ಲಾ ಐಸ್‌ ಕ್ರೀಂ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು. ಇಂತಹ ನೂರಾರು ಪ್ರಶಸ್ತಿಗಳು ಐಡಿಯಲ್‌ಗೆ ಲಭಿಸಿವೆ. ಆದರೆ ಪ್ರಭಾಕರ ಕಾಮತ್‌ ಅವರು ಆ ಯಶಸ್ಸೆಲ್ಲವನ್ನೂ ಗ್ರಾಹಕರಿಗೆ ಮತ್ತು ಸಿಬಂದಿಗೆ ಅರ್ಪಿಸುತ್ತಾ ಖುಷಿಪಟ್ಟವರು. ಇದೊಂದು ಅನುಕರಣೀಯವಾದ ಗುಣ. ಪ್ರಭಾಕರ ಕಾಮತ್‌ ಅವರು ಐಸ್‌ಕ್ರೀಂ ಉತ್ಪಾದಕರ ಸಂಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದರು. ಮಂಗಳೂರಿನಲ್ಲಿ ಐಸ್‌ಕ್ರೀಂ ಉತ್ಪಾದಕರೆಲ್ಲ ಒಂದೇ ಕುಟುಂಬದವರಂತೆ ಇರುವುದು ವಿಶೇಷವಾಗಿದೆ. ಈ ಏಕತೆಯ ಹಿನ್ನೆಲೆಯಲ್ಲಿ ಕಾಮತ್‌ ಅವರ ಪಾತ್ರ ನಿರ್ಣಾಯಕವಾಗಿತ್ತು. ಎಲ್ಲರನ್ನು ಜತೆಯಲ್ಲಿ ಇರಿಸಿಕೊಳ್ಳುತ್ತಾ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಾ ಸಾಧನೆಗೈದಿರುವ ಮಹಾನುಭಾವ ಅವರು.

ಈಗಿನ ಪೀಳಿಗೆಯ ಮಕ್ಕಳು, ಯುವಜನತೆ ಐಸ್‌ ಕ್ರೀಂ ಜತೆಗೆ ಫಿಜ್ಜಾ, ಪಾನಿಪುರಿ, ಬೇಲ್‌ಪುರಿ, ಕಟ್ಲೆಟ್‌ ಇತ್ಯಾದಿ ತಿನಿಸುಗಳನ್ನೇ ಇಷ್ಟ ಪಡುತ್ತಾರೆ ಎಂದು ತಿಳಿದೇ ಅವರು ಪಬ್ಟಾಸ್‌, ಐಡಿಯಲ್‌ ಕೆಫೆಯನ್ನು ತೆರೆದು ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಬಂದರು. ಈ ಮೂಲಕ ಬದಲಾವಣೆಗಳ ಜತೆಗೆ ಸಾಗಿದರು. ಹಾಗಾಗಿ ಈ ವಿಸ್ತರಣ ಪ್ರಯೋಗವೂ ಯಶಸ್ಸಿಗೆ ಪಾತ್ರವಾಯಿತು.
“ಪಬ್ಟಾ ಮಾಮ್‌’ ಎಂದೇ ಪ್ರಸಿದ್ಧರಾಗಿದ್ದ ಈ ಸರಳಸಜ್ಜನ, ವಿನಯಶೀಲತೆಯ ಸಾಕಾರಮೂರ್ತಿಯ ಅಗಲುವಿಕೆಯು ಇಡೀ ಸಮಾಜಕ್ಕೆ ಅತೀ ನೋವಿನ ಸಂಗತಿಯಾಗಿದೆ. ಅವರ ಅಗಲುವಿಕೆಯು ಕೇವಲ ಐಸ್‌ ಕ್ರೀಂ ಉದ್ಯಮಕ್ಕೆ ಮಾತ್ರವಲ್ಲ, ಒಟ್ಟು ಉದ್ಯಮ ಕ್ಷೇತ್ರಕ್ಕೆ, ಹೊಸತನಗಳ ಆವಿಷ್ಕಾರಕ್ಕೆ, ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ ಆಗಿರುವ ಭರಿಸಲಾರದ ನಷ್ಟ. “ಮಂಗಳೂರಿಗೆ ಬಂದವರು, ಮಂಗಳೂರಿನಲ್ಲಿ ಇದ್ದವರು ಐಡಿಯಲ್‌ ಐಸ್‌ ಕ್ರೀಂ ಸವಿಯದೇ ಇದ್ದರೆ ಮಂಗಳೂರು ಭೇಟಿ ಪರಿಪೂರ್ಣವಾಗುವುದಿಲ್ಲ’ ಎಂಬ ಒಂದು ಮಾತಿದೆ. ಈ ಬ್ರ್ಯಾಂಡ್‌ ನಿರ್ಮಾಣಕ್ಕೆ ಕಾಮತ್‌ ಅವರ ದೂರದರ್ಶಿತ್ವವೇ ಕಾರಣ. ನಿಜ ಅರ್ಥದಲ್ಲಿ ಅವರು ಕರ್ಮಯೋಗಿ. ಬದುಕಿನ ಎಲ್ಲ ಉತ್ತಮ ಸಂಗತಿಗಳ ಪ್ರತೀಕವಾಗಿದ್ದ ಅವರು ನಿಜಾರ್ಥದಲ್ಲಿ ಅಜಾತಶತ್ರು. ಅವರ ಜೀವನೋತ್ಸಾಹ, ಜೀವನಪ್ರೀತಿ, ಹೊಸತನಕ್ಕಾಗಿನ ತುಡಿತ, ಸೇವಾ ಮನೋಭಾವ, ಸಮಾಜಸ್ಪಂದನ ಗುಣಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದುದಾಗಿದೆ.

Advertisement

– ಉಲ್ಲಾಸ್‌ ಕಾಮತ್‌
ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಜ್ಯೋತಿ ಲ್ಯಾಬೊರೇಟರೀಸ್‌

Advertisement

Udayavani is now on Telegram. Click here to join our channel and stay updated with the latest news.