Advertisement

ಅಲ್ಪಸಂಖ್ಯಾತರು ಕಾಂಗ್ರೆಸ್‌ ಬೆಂಬಲಿಸಿದ್ದು ಸಾಕು

12:57 PM Mar 26, 2017 | |

ದಾವಣಗೆರೆ: ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾದರೂ ಅಲ್ಪಸಂಖ್ಯಾತರ ಅಭಿವೃದ್ಧಿ ಆಗಿಲ್ಲ. ಈವರೆಗೂ ನಮ್ಮನ್ನು ಮತಬ್ಯಾಂಕ್‌ ಮಾಡಿಕೊಂಡವರನ್ನು ಬೆಂಬಲಿಸಿದ್ದು ಸಾಕು. ಇನ್ನು ನಮ್ಮ ಅಭಿವೃದ್ಧಿ ಆಲೋಚಿಸುವ ಬಿಜೆಪಿಗೆ ಮತ ನೀಡಿ ಎಂದು ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಅಬ್ದುಲ್‌ ಅಜೀಂ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.

Advertisement

ಶನಿವಾರ ಪಕ್ಷದ ಕಚೇರಿಯಲ್ಲಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ, ಮಾತನಾಡಿದ ಅವರು, ಪರಿಶಿಷ್ಟರು ಹಾಗೂ ಮುಸ್ಲಿಮರನ್ನು ಓಟ್‌ಬ್ಯಾಂಕ್‌ ಮಾಡಿಕೊಂಡಿದ್ದ ಕಾಂಗ್ರೆಸ್‌ ನಮ್ಮನ್ನು ಯಾರೂ ಸೋಲಿಸಲಾಗಲ್ಲ ಎಂಬುದಾಗಿ ಭಾವಿಸಿತ್ತು. ಬಿಜೆಪಿಯನ್ನ ಕೋಮುವಾದಿ ಪಕ್ಷವೆಂದು ಬಿಂಬಿಸಿ, ಅಲ್ಪಸಂಖ್ಯಾತರಲ್ಲಿ ವಿಷಬೀಜ ಬಿತ್ತಿದ ಕಾಂಗ್ರೆಸ್‌, ನಮ್ಮ ಪಕ್ಷದತ್ತ ಅಲ್ಪಸಂಖ್ಯಾತರು ಸುಳಿಯದಂತೆ ಮಾಡಿತ್ತು.

ಈಗ ಸಮುದಾಯದವರು ಎಚ್ಚೆತ್ತುಕೊಂಡು ಜಾತಿ, ಧರ್ಮ, ಭಾಷೆ ಆಧಾರದ  ಮೇಲೆ ಜನರನ್ನು ವಿಂಗಡಿಸುವ ಪಕ್ಷ ತಿರಸ್ಕರಿಸಬೇಕಿದೆ ಎಂದರು. ಕಳೆದ 70 ವರ್ಷಗಳಲ್ಲಿ ಅಲ್ಪಸಂಖ್ಯಾತರು ಶಾಂತಿ-ಸೌರ್ಹಾದತೆ ಕಳೆದುಕೊಂಡಿದ್ದೇವೆ. ನಿಜವಾದ ಹಿಂದು-ಮುಸ್ಲಿಂ ಮಾತ್ರ ಒಳ್ಳೆಯವರಾಗಲು ಸಾಧ್ಯ. ಯಾವುದೇ ಧರ್ಮ ಕೆಟ್ಟದನ್ನು ಸಾರುವುದಿಲ್ಲ. ನಮ್ಮ ನಮ್ಮ ಧರ್ಮ ಸರಿಯಾಗಿ ಅರ್ಥಮಾಡಿಕೊಂಡಲ್ಲಿ ಭೇದ-ಭಾವ ಉಂಟಾಗುವುದಿಲ್ಲ.

ನಮ್ಮ ಮನೆಯ ಒಳಗೆ ಧರ್ಮ, ಜಾತಿ, ಆಚಾರ-ವಿಚಾರ, ಸಂಪ್ರದಾಯ ಇರಲಿ. ಮನೆಯಿಂದ ಹೊರಗೆ ಎಲ್ಲರೂ ಭಾರತೀಯರು ಎಂಬ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಭಾರತೀಯ ಜನತಾ ಪಕ್ಷದ ಬಗ್ಗೆ ಯಾವುದೇ ರೀತಿ ಸಂಶಯ, ಆತಂಕ ಬೇಡ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಮುದಾಯದವರ ಸಮಗ್ರ ಅಭಿವೃದ್ಧಿಗೆ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ ಹಾಕಿದ್ದರಿಂದಲೇ ಆ ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಲು ಸಾಧ್ಯವಾಗಿದೆ.

ಆ ಚುನಾವಣೆ ಗಮನಿಸಿದರೆ ಅಲ್ಪಸಂಖ್ಯಾತರು ಬಿಜೆಪಿ ವಿರೋಧಿಗಳಲ್ಲ ಎಂಬುದು ಸಾಬೀತಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಅಲ್ಪಸಂಖ್ಯಾತರು ಬಿಜೆಪಿ ಬೆಂಬಲಿಸಬೇಕಿದೆ. ಕೇವಲ 25% ಅಲ್ಪಸಂಖ್ಯಾತರು ಮತ ನೀಡಿದರೆ ಸಾಕು ಪಕ್ಷ ಅಧಿಕಾರಕ್ಕೆ ಬರಲಿದೆ. ಬಿ.ಎಸ್‌.ಯಡಿಯೂರಪ್ಪ  ಮುಖ್ಯಮಂತ್ರಿಯಾದಲ್ಲಿ ಮಹಾತ್ಮ ಗಾಂಧೀಜಿ ಆಶಯದ ರಾಮರಾಜ್ಯದ ಆಡಳಿತದ ಯೋಜನೆ ಸಿದ್ಧಗೊಂಡಿದೆ ಎಂದು ಅವರು ಹೇಳಿದರು. 

Advertisement

ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಅಲ್ಪಸಂಖ್ಯಾತ ಮೋರ್ಚಾ ಸಹ ಮಹತ್ತರ ಪಾತ್ರ ವಹಿಸಲಿದೆ. ಈಗಾಗಲೇ 36 ಜಿಲ್ಲಾ ಘಟಕ, 276 ಮಂಡಲ ರಚಿಸಿ 2 ತಿಂಗಳ ಹಿಂದೆಯೇ ಬಿಜೆಪಿ ಅಲ್ಪಸಂಖ್ಯಾತ ಕುಟುಂಬ ಅಭಿಯಾನ ಆರಂಭಿಸಲಾಗಿದೆ. ಈಗ 77,600 ಕುಟುಂಬಗಳ ಸದಸ್ಯರನ್ನಾಗಿಸಲಾಗಿದೆ. ವಿಧಾನ ಸಭಾ ಚುನಾವಣೆ ವೇಳೆ ಒಟ್ಟು 13.80 ಲಕ್ಷ ಬಿಜೆಪಿ ಅಲ್ಪಸಂಖ್ಯಾತ ಕುಟುಂಬಗಳ ಸದಸ್ಯತ್ವ ಗುರಿ ಹೊಂದಲಾಗಿದೆ.

ಕ್ಷೇತ್ರದಲ್ಲಿ ಕನಿಷ್ಠ 5000 ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡುವಂತಾಗಬೇಕು ಎಂದು ಅವರು ತಿಳಿಸಿದರು.  ನಮ್ಮ ಮುಖಂಡರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಬಗೆಹರಿಸಿದ್ದಾರೆ. ಈ ಹಿಂದೆ ಮಿಷನ್‌ 150+ ಇತ್ತು. ಈಗ ಮಾಜಿ ಮುಖ್ಯಮಂತ್ರಿ ಎಸ್‌. ಎಂ.ಕೃಷ್ಣ ಅವರು ಬಿಜೆಪಿ ಸೇರಿದ ಮೇಲೆ 170ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ.

ಅವಧಿ ಮುಗಿಯುವ ಮುನ್ನವೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಮೇ ನಂತರ ಕಾಂಗ್ರೆಸ್‌ ಪಕ್ಷದ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ರಾಜಕೀಯ ದೃವೀಕರಣ ನಡೆಯಲಿದ್ದು, ಡಿಸೆಂಬರ್‌ ಇಲ್ಲವೆ ಜನವರಿಯಲ್ಲಿ ಚುನಾವಣೆ ಖಚಿತ ಎಂದು ಅವರು ಹೇಳಿದರು.   

Advertisement

Udayavani is now on Telegram. Click here to join our channel and stay updated with the latest news.

Next