Advertisement

ಫೋರ್ಟ್‌ ಶ್ರೀ ಅಯ್ಯಪ್ಪ  ಸೇವಾ ಸಮಿತಿ:ಧಾರ್ಮಿಕ ಸಭೆ,ಸಮ್ಮಾನ

04:37 PM Jan 09, 2018 | |

ಮುಂಬಯಿ: ನಶ್ವರವಾದ ಬದುಕಿನಲ್ಲಿ ಅಧಿಕಾರ, ಅಂತಸ್ತುಗಳ ವ್ಯಾಮೋಹ ಬೇಡ. ಸಮಾಜ ಸೇವೆಯಲ್ಲಿ ದೇವರನ್ನು ಕಾಣಬೇಕು. ತ್ಯಾಗಮಯ ಜೀವನ ಪರೋಪಕಾರ ಚಿಂತನೆಗಳಿಂದ ಮನುಕುಲದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸಮಾನತೆಯ ಸಂದೇಶದೊಂದಿಗೆ ದೀಕ್ಷೆ ಸ್ವೀಕರಿಸಿದ ಅಯ್ಯಪ್ಪ ವ್ರತಧಾರಿಗಳು ಸಹಕಾರ ಮನೋಭಾವದ ಸಮಾಜ ಕಟ್ಟಲು ಮುಂದಾಗಬೇಕು. ಒಂದು ಮಂಡಲದ ಕಠಿಣ ತಪಸ್ಸು ಸಮಸ್ತ ಜನರ ಕಷ್ಟ, ಕಾರ್ಪಣ್ಯಗಳನ್ನು ನೀಗಿಸಲಿ ಎಂದು ಸಮಾಜ ಸೇವಕ, ಉದ್ಯಮಿ ಎ. ಬಿ. ಶೆಟ್ಟಿ ಅವರು ನುಡಿದರು.

Advertisement

ಜ. 7 ರಂದು ಫೋರ್ಟ್‌ ಬೋಂಬೆ ಸಮಾಚಾರ ಮಾರ್ಗದ ಸಮೀಪದಲ್ಲಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಫೋರ್ಟ್‌ ಮುಂಬಯಿ ಮತ್ತು ಶ್ರೀ ಅಯ್ಯಪ್ಪ ನ್ಪೋರ್ಟ್ಸ್ ಕ್ಲಬ್‌ನ 37 ನೇ ವಾರ್ಷಿಕ ಇರುಮುಡಿ ಸೇವೆ ಮತ್ತು ಮಹಾಪೂಜೆಯಲ್ಲಿ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರಲ್ಲೂ ಭಗವಂತನಿದ್ದಾನೆ. ಸತ್ಕರ್ಮಗಳ ಮೂಲಕ ಆತನನ್ನು ಕಾಣಬೇಕು. ಅಯ್ಯಪ್ಪ ಸ್ವಾಮಿಗಳ ನಿಸ್ವಾರ್ಥ ಸೇವೆ, ಹಿತೈಷಿಗಳ ಸಹಕಾರದಿಂದ ನಮ್ಮ ಸಂಸ್ಥೆ 37 ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ವೈದ್ಯಕೀಯ, ಶಿಕ್ಷಣ, ಕ್ರೀಡೆಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದೆ ಎಂದು ನುಡಿದು ಶಬರಿಮಲೆಯಾತ್ರಾರ್ಥಿಗಳಿಗೆ ಶುಭಹಾರೈಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಭವಾನಿ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್‌ ಇದರ ಹಿರಿಯ ಸದಸ್ಯ, 18 ನೇ ವಾರ್ಷಿಕ ಶಬರಿಮಲೆಯಾತ್ರೆಗೈಯುತ್ತಿರುವ ಪ್ರಕಾಶ್‌ ಕಾಂಚನ್‌ ಪಡುಬಿದ್ರೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಮಾಜ ಸೇವಕ, ಸಾಂಸ್ಕೃತಿಕ ರಾಯಭಾರಿ, ಅನಿವಾಸಿ ಭಾರತೀಯ ಲೀಲಾಧರ ಬೈಕಂಪಾಡಿ ಬಹರೇನ್‌ ಅವರು ಮಾತನಾಡಿ, ಸನಾತನ ಧರ್ಮಗಳ ಬಗ್ಗೆ ವಿಮರ್ಶೆ ಬೇಡ. ಚಿಂತನೆ ಬೇಕು. ಇದಕ್ಕೆ ತನ್ನದೆ ಆದ ಮೌಲ್ಯಗಳಿವೆ. ಸತ್ಯದ ನುಡಿ ಧರ್ಮದ ಪಾಲನೆ ಎಲ್ಲರ ಆಶಯವಾಗಿದೆ ಎಂದರು.

ಶ್ರೀ ಅಯ್ಯಪ್ಪ ನ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಮೂರು ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ಚೆಕ್‌ನ್ನು ವೇದಿಕೆಯ ಗಣ್ಯರು ಹಸ್ತಾಂತರಿಸಿದರು. ಅತಿಥಿಗಳಾಗಿ ಆಗಮಿಸಿದ ಜುನಿಟಾ  ಬಿಲ್ಡಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಅಧ್ಯಕ್ಷ ಗಿಲ್ಬರ್ಟ್‌ ಎಸ್‌. ಡಿಸೋಜಾ, ನಮ್ಮ ಸಂಘ ಡೊಂಬಿವಲಿ ಅಧ್ಯಕ್ಷ ಭಾಸ್ಕರ ಪೂಜಾರಿ, ಮುಂಬಯಿಯ ಮಾಜಿ ಷರೀಫ್‌ ಜಗನ್ನಾಥ ಹೆಗಡೆ ಅವರು ಮಾತನಾಡಿ ಶುಭಹಾರೈಸಿದರು.

Advertisement

ವೇದಿಕೆಯಲ್ಲಿ ಫೋರ್ಟ್‌ ಹೊಟೇಲ್‌ ಉದ್ಯಮಿ, ಆಹಾರ್‌ನ ಉಪಾಧ್ಯಕ್ಷ ಮಹೇಂದ್ರ ಎಸ್‌. ಕರ್ಕೇರ, ಸಂಜೀವಿನಿ ಸೋಶಿಯಲ್‌ ವೆಲ್ಫೆàರ್‌ ಟ್ರಸ್ಟ್‌ ಮುಂಬಯಿ ಅಧ್ಯಕ್ಷ ಉದಯ ಕೋಟೇಶ್ವರ್‌, ಕೈಗಾರಿಕೋದ್ಯಮಿ ಭರತ್‌ ಶೆಟ್ಟಿ, ಫೋರ್ಟ್‌ ಸೆಂಟ್ರಲ್‌ಬಾರ್‌ನ ಮಾಲಕ ರಾಜೇಶ್‌ ಹೆಗ್ಡೆ, ಹೊಟೇಲ್‌ ಉದ್ಯಮಿ ಕರುಣಾಕರ ಪೂಜಾರಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್‌ ಇದರ ಚಂದ್ರಶೇಖರ ಗುರುಸ್ವಾಮಿ ಇನ್ನಂಜೆ ಮೊದಲಾದವರು ಉಪಸ್ಥಿತರಿದ್ದು ಹಾರೈಸಿದರು. ಸುಕೇಶ್‌ ಶೆಟ್ಟಿ ಎಕ್ಕಾರು ಅವರು ಸಂಸ್ಥೆಯು ನಡೆದು ಬಂದ ಬಗೆ ಹಾಗೂ ಕಾರ್ಯಯೋಜನೆಗಳ ಬಗ್ಗೆ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ವಿಜಯರಾಜ್‌ ಕರ್ಕೇರ, ಶಾಂತಾರಾಮ ಪುತ್ರನ್‌, ಕೃಷ್ಣ ಶೆಟ್ಟಿ, ಗಣೇಶ್‌ ಗುರುಸ್ವಾಮಿ, ಕುಮಾರ ಗುರುಸ್ವಾಮಿ, ಸುಭಾಶ್ಚಂದ್ರ ಶೆಟ್ಟಿ, ಜಯಕರ  ಪೂಜಾರಿ, ನವೀನ್‌ ಶೆಟ್ಟಿ, ಕಿಶೋರ್‌ ಕರ್ಕೇರ, ಮೋಹನ್‌ ಮೆಂಡನ್‌ ಅವರು ಅತಿಥಿಗಳನ್ನು ಗೌರವಿಸಿದರು.ಮಹಾಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಅಧಿಕ ಸಂಖ್ಯೆ ಯಲ್ಲಿ ಭಕ್ತಾದಿಗಳು, ತುಳು-ಕನ್ನಡಿಗ ಉದ್ಯಮಿಗಳು, ಅಯ್ಯಪ್ಪ ವ್ರತಧಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಭಾಷೆಗಳಿಗೆ ಜಾತೀಯ ಸೋಂಕು ಬೇಡ. ಪ್ರತಿ ಯೊಬ್ಬರ ಧರ್ಮ ಒಳಿತನ್ನೇ ಬಯಸುತ್ತದೆ. ಗಳಿಕೆಯ ಸ್ವಲ್ಪಾಂಶವನ್ನು ಅವಶ್ಯಕತೆ ಇದ್ದವರಿಂದ ನೀಡಬೇಕು. ಪರರ ಕಷ್ಟದಲ್ಲಿ ಸಹಭಾಗಿತ್ವ ವಹಿಸಿ ಸಹಕ ರಿಸಬೇಕು. ನಾನು-ನನ್ನದು ಎಂಬುವುದನ್ನು ಬಿಟ್ಟು ನಮ್ಮದು, ನಮ್ಮಿಂದ ಎಂಬುವುದನ್ನು ಅರಿತಾಗ ಮಾತ್ರ ಜೀವ ಸಾರ್ಥಕ್ಯಪಡೆಯಲು ಸಾಧ್ಯ 
 ಕೆ. ಡಿ. ಶೆಟ್ಟಿ (ಕಾರ್ಯಾಧ್ಯಕ್ಷರು : ಭವಾನಿ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌).

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next