Advertisement

ಕಳ್ಳರ ಉಪಟಳಕ್ಕೆ ಬೇಸತ್ತ ರೈತಾಪಿ ವರ್ಗ

02:29 PM Oct 18, 2021 | Team Udayavani |

ರಾಯಚೂರು: ಮಾಡಿಕೊಂಡು ತಿಂದರೆ ಮಂದಿ ಕಾಟ, ಬೇಡಿಕೊಂಡು ತಿಂದರೆ ನಾಯಿ ಕಾಟ ಎನ್ನುವಂತಾಗಿದ್ದು ರೈತರ ಪರಿಸ್ಥಿತಿ. ಕಷ್ಟಪಟ್ಟು ಲಕ್ಷಾಂತರ ರೂ. ಖುರ್ಚು ಮಾಡಿ ಕೃಷಿ ಮಾಡಿಕೊಂಡರೆ ಕಳ್ಳರ ಉಪಟಳದಿಂದ ಬೇಸತ್ತು ಹೋಗುತ್ತಿದ್ದಾರೆ ರೈತರು.

Advertisement

ಅದರಲ್ಲೂ ಗಡಿಭಾಗವಾದ ರಾಯಚೂರು ತಾಲೂಕಿನ ಕೆಲ ಹಳ್ಳಿಗಳಲ್ಲಿ ಕೃಷಿ ಪರಿಕರಗಳು, ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ರೈತರ ನಿದ್ದೆಗೆಡಿಸುವಂತೆ ಮಾಡಿದೆ.

ರವಿವಾರ ಬೆಳಗ್ಗೆ ಜಮೀನಿನಲ್ಲಿ ಹಾಕಿದ್ದ ಡ್ರಿಪ್‌ ಪೈಪ್‌ ಕಳವು ಮಾಡಿಕೊಂಡು ಹೊರಟಿದ್ದು, ಇಬ್ಬರು ಖದೀಮರನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ಕಡಗಂದೊಡ್ಡಿ ಗ್ರಾಮದ ಗುರುಸ್ವಾಮಿ ಎನ್ನುವವರ ಜಮೀನಿಗೆ ಅಳವಡಿಸಿದ್ದ ಡ್ರಿಪ್‌ ಪೈಪ್‌ಗ್ಳನ್ನು ಸುತ್ತಿಕೊಂಡು ಬೈಕ್‌ನಲ್ಲಿ ಹೋಗುವಾಗ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ರಾಯಚೂರಿನ ಮೈಲಾರಿ ನಗರದ ನಿವಾಸಿ ಈರೇಶ, ತಿಮ್ಮಪ್ಪ ಆರೋಪಿಗಳು. ಆದರೆ, ಈ ಘಟನೆ ನಡೆದಿರುವುದು ಇದೇ ಮೊದಲಲ್ಲ. ಹಿಂದೆ ಸಾಕಷ್ಟು ಬಾರಿ ಜಮೀನುಗಳಲ್ಲಿ ಹಾಕಿದ್ದ ಪೈಪ್‌ಗ್ಳು ಕಳವಾಗಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿತ್ತು. ರಾತ್ರೋರಾತ್ರಿ ಬರುವ ದುಷ್ಕರ್ಮಿಗಳು ಈ ರೀತಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗುವುದೇ ಕಾಯಕವಾದಂತಾಗಿತ್ತು.

ರೈತರು ಸಾಲಸೋಲ ಮಾಡಿಕೊಂಡು ಜಮೀನುಗಳಲ್ಲಿ ಬೆಲೆಬಾಳುವ ಕೃಷಿ ಸಾಮಗ್ರಿಗಳನ್ನು ಹಾಕಿಕೊಂಡಿರುತ್ತಾರೆ. ಆದರೆ, ಈ ರೀತಿ ಕಳವು ಮಾಡಿಕೊಂಡರೆ ರೈತರ ವರ್ಷದ ಆದಾಯಕ್ಕೆ ಕೊಕ್ಕೆ ಬೀಳುತ್ತದೆ. ಗಡಿಭಾಗವಾದ ಕಾರಣ ಆಂಧ್ರ, ತೆಲಂಗಾಣದಿಂದಲೂ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ಈಚೆಗೆ ತೆಲಂಗಾಣ ಮೂಲದ ಇಬ್ಬರು ಕಳ್ಳರು 10 ಕುರಿಗಳನ್ನು ಕಳವು ಮಾಡಿಕೊಂಡು ಹೋಗುವಾಗ ಸಿಕ್ಕಿ ಬಿದಿದ್ದರು. ಇನ್ನೂ ಯಾಪಲದಿನ್ನಿ ಠಾಣೆಯ ವ್ಯಾಪ್ತಿಯಲ್ಲೂ ಈಚೆಗೆ ಎಮ್ಮೆ ಕಳುವಿಗೆ ಸಂಬಂಧಿಸಿದ ದೂರು ಬಂದಿತ್ತು.

Advertisement

ಠಾಣೆ ಮೆಟ್ಟಿಲೇರದ ಪ್ರಕರಣಗಳು

ಕೆಲವೊಂದು ಪ್ರಕರಣಗಳು ಮಾತ್ರ ಠಾಣೆ ಮೆಟ್ಟಿಲು ಹತ್ತಿದರೆ ಸಾಕಷ್ಟು ಪ್ರಕರಣಗಳು ಠಾಣೆವರೆಗೂ ಬರುವುದೇ ಇಲ್ಲ ಎನ್ನುತ್ತಾರೆ ರೈತ ಮುಂಖಡರು. ಸಣ್ಣ ಪುಟ್ಟ ವಸ್ತುಗಳನ್ನು ಕಳೆದಕೊಂಡ ರೈತರು, ನಮಗ್ಯಾಕೆ ಪೊಲೀಸರ ಉಸಾಬರಿ ಎಂದು ಸುಮ್ಮನಾಗುತ್ತಾರೆ. ಹೀಗೆ ಸಿಕ್ಕಿ ಬಿದ್ದ ಕಳ್ಳರನ್ನು ವಶಕ್ಕೆ ಪಡೆಯುವ ಪೊಲೀಸರು ಕೆಲವೇ ದಿನಗಳಲ್ಲಿ ಬೇಲ್‌ ಮೇಲೆ ಬಿಡುಗಡೆ ಮಾಡುವುದರಿಂದ ಅವರು ಮತ್ತದೇ ದುಷ್ಕೃತ್ಯಗಳನ್ನು ಮುಂದುವರಿಸುತ್ತಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಅಕಾಲಿಕ ಮಳೆಗೆ ನೆಲಕ್ಕಚ್ಚಿದ ಭತ್ತದ ಪೈರುಗಳು : ಸಂಕಷ್ಟದಲ್ಲಿ ರೈತರು

ಅನುಕೂಲಕರ ವಾತಾವರಣ

ಹಳ್ಳಿಗಳು ರಾತ್ರಿ 10 ಗಂಟೆಗೆಲ್ಲ ಸ್ಥಬ್ಧವಾಗುತ್ತವೆ. ಜಮೀನುಗಳಲ್ಲಿ ನೀರು ಕಟ್ಟುವ ಕೆಲಸ ಇದ್ದಾಗ ರೈತರು ಹೋಗುವುದು ಬಿಟ್ಟರೆ ಖಾಲಿ ವೇಳೆ ಹೋಗುವುದಿಲ್ಲ. ಈ ಅವಕಾಶ ಬಳಸಿಕೊಳ್ಳುವ ಕಳ್ಳರು ರಾಕಳ್ಳರ ಉಪಟಳಕ್ಕೆ ಬೇಸತ್ತ ರೈತಾಪಿ ವರ್ಗಜಾರೋಷವಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಬೆಳಗಾಗುವುದರೊಳಗೆ ಊರು ದಾಟಿಕೊಂಡು ಹೋಗಿ ಬಿಡುತ್ತಾರೆ.

ರೈತರು ನೆಮ್ಮದಿಯಿಂದ ಜೀವನ ಮಾಡದಂತೆ ಸ್ಥಿತಿ ಇದೆ. ಒಂದೆಡೆ ವಿದ್ಯುತ್‌ ಸಮಸ್ಯೆಯಿಂದ ರಾತ್ರೋರಾತ್ರಿ ಜಮೀನಿಗೆ ಹೋಗಿ ನೀರು ಕಟ್ಟಬೇಕಿದ್ದು, ನಿದ್ದೆಯೇ ಇಲ್ಲದಾಗಿದೆ. ಈಗ ಕಳ್ಳರ ಹಾವಳಿಯಿಂದ ನಿದ್ದೆಗೆಡಬೇಕಿದೆ. ಪೊಲೀಸರು ಕಳ್ಳರಿಗೆ ಬೇಗನೇ ಬೇಲ್‌ ನೀಡಿ ಹೊರಗೆ ಕಳುಹಿಸುವುದೇ ಸಮಸ್ಯೆಗೆ ಕಾರಣ. ಕನಿಷ್ಟ 6 ತಿಂಗಳು ಜೈಲಲ್ಲೇ ಇರುವಂತೆ ಮಾಡಬೇಕು. ರಾತ್ರಿ ಹೊತ್ತಲ್ಲಿ ಹಳ್ಳಿಗಳಲ್ಲಿ ಪೊಲೀಸರು ಗಸ್ತು ತಿರುವಂತೆ ಮಾಡಬೇಕು. -ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next