ರಬಕವಿ-ಬನಹಟ್ಟಿ: 9.6 ಕಿ.ಮೀ ಉದ್ದದ ಮತ್ತು 100 ಮೀ ಅಗಲದ ಸಸಾಲಟ್ಟಿಯ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಹಳಿಂಗಳಿ, ಹನಗಂಡಿ ಮತ್ತು ಯರಗಟ್ಟಿ ಗ್ರಾಮದ ರೈತರ ಬೆಳೆಗಳಿಗೆ ಭಾರಿ ಹಾನಿಯಾಗಿದ್ದು, ಇಲಾಖೆಯ ಅಧಿಕಾರಿಗಳು ಕೇವಲ ಒಂದು ವರ್ಷದ ಬೆಳೆ ಪರಿಹಾರವನ್ನು ನೀಡಲು ಮುಂದಾಗಿದ್ದು, ಇದರಿಂದ ಈ ಭಾಗದ ಅಂದಾಜು 25 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಯಾಗಿದ್ದು, ಹಾನಿಗೆ ಒಳಗಾದ ರೈತರಿಗೆ ಮೂರು ವರ್ಷದ ಬೆಳೆ ಪರಿಹಾರವನ್ನು ನೀಡಬೇಕು ಎಂದು ರೈತ ಸಂಘದ ಮುಖಂಡ ಶ್ರೀಕಾಂತ ಘೂಳನ್ನವರ ಸರ್ಕಾರವನ್ನು ಆಗ್ರಹಿಸಿದರು.
ಬುಧವಾರ ರಬಕವಿಯ ಜಿಎಲ್ ಬಿಸಿ ಆವರಣದಲ್ಲಿ ಹಮ್ಮಿಕೊಂಡ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡುತ್ತ, ಈ ಕುರಿತು ಜಿಎಲ್ ಬಿಸಿ ಅಧಿಕಾರಿಗಳೊಂದಿಗೆ ಎರಡು ಸಂಧಾನ ಸಭೆಗಳು ನಡೆದಿದ್ದು ಯಾವುದೆ ಪ್ರಯೋಜನವಾಗಿಲ್ಲ. ಬೆಳೆ ಪರಿಹಾರ ಕುರಿತು ಅಧಿಕಾರಿಗಳು ಕೇವಲ ಮೌಖಿಕ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಹಾನಿಗೆ ಒಳಗಾದ ರೈತರಿಗೆ ಯಾವುದೆ ಲಿಖಿತ ಆದೇಶವನ್ನು ನೀಡಿಲ್ಲ.
ಈ ಕಾಮಗಾರಿಯಿಂದ ರೈತರಿಗೆ ಬಹಳಷ್ಟು ನಷ್ಟವಾಗುತ್ತಿದೆ. ಈಗಾಗಲೇ ಭೂಮಿಯನ್ನು ಅಗೆದು ಬೃಹತ್ ಪೈಪ್ ಅಳವಡಿಸುವ ಕಾರ್ಯ ನಡೆದಿದೆ. ಭೂಮಿಯನ್ನು ಅಗೆಯುವ ಸಂದರ್ಭದಲ್ಲಿ ಈ ಭಾಗದ ರೈತರು ಕೃಷ್ಣಾ ನದಿಯಿಂದ ಪೈಪ್ ಲೈನ್ ಮಾಡಿಕೊಂಡಿದ್ದಾರೆ. ಅವುಗಳಿಗೂ ಕೂಡಾ ಧಕ್ಕೆಯಾಗಿದ್ದು, ರೈತರು ಸಾಕಷ್ಟು ಹಾನಿಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿಯೂ ಬೆಳೆಗಳಿಗೆ ಹಾನಿಯಾಗುತ್ತಿದೆ. ಬೃಹತ್ ಪೈಪ್ ಅಳವಡಿಸು ಸಂದರ್ಭದಲ್ಲಿ ಚಿಕ್ಕ ಪುಟ್ಟ ಸಣ್ಣ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ ರೈತರಿಗೆ ಬಹಳಷ್ಟು ಹಾನಿಯಾಗುತ್ತಿದೆ ಎಂದು ಶ್ರೀಕಾಂತ ಘೂಳನ್ನವರ ತಿಳಿಸಿದರು.
ರೈತ ಮುಖಂಡ ಬಸವರಾಜ ಸೆಂಡಗಿ ಮಾತನಾಡಿ, ಈ ಭಾಗದ ಅಂದಾಜು 50 ರಿಂದ 60 ರೈತರ ಭೂಮಿಗಳಿಗೆ ತೊಂದರೆಯಾಗುತ್ತಿದೆ. ಈ ಕಾಮಗಾರಿಯಿಂದ ರೈತರ ಜಮೀನುಗಳಿಗೆ ವೈಜ್ಞಾನಿಕವಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆಗೆ ನೀಡಬೇಕು ಎಂದು ಆಗ್ರಹಿಸಿದರು.
ಮಲ್ಲಪ್ಪ ಅಳ್ಳಿಮಟ್ಟಿ, ಮಹಾವೀರ ಮುರಗುಂಡಿ, ಶೇಖರ ಅಳ್ಳಿಮಟ್ಟಿ, ಅಶೋಕ ಮುರಗುಂಡಿ, ಧರೆಪ್ಪ ದೇಸಾಯಿ, ಮಲ್ಲಪ್ಪ ಗೋಪಾಳಿ, ಭೀಮಶಿ ಮುದ್ದೆನ್ನವರ ಸೇರಿದಂತೆ ಅನೇಕ ರೈತರು ಇದ್ದರು. ನೀರಾವರಿ ಇಲಾಖೆಯ ಅಧಿಕಾರಿಗಳಾ ಚೇತನ ಅಬ್ಬಿಗೇರಿ, ಶ್ರೀಧರ ನಂದಿಹಾಳ ಇದ್ದರು.
ಈ ಸಂದರ್ಭದಲ್ಲಿ ನೀರಾವರಿಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಶಿವಲಿಂಗಯ್ಯ ಮಾತನಾಡಿ, ರೈತರು ಮೂರು ವರ್ಷದ ಬೆಳೆ ಹಾನಿಯನ್ನು ಕೇಳುತ್ತಿದ್ದಾರೆ. ಮೂರು ವರ್ಷದ ಹಾನಿಯನ್ನು ನೀಡಲು ಸಾಧ್ಯವಿಲ್ಲ. ಈಗಾಗಲೇ ಮುಧೋಳದ ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯಲ್ಲಿಯೂ ಕೂಡಾ ಒಂದೇ ಬಾರಿ ಪರಿಹಾರ ನೀಡಲಾಗುತ್ತಿದೆ ಎಂದರು.
– ಶಿವಲಿಂಗಯ್ಯ ಎಂ. ಕಾರ್ಯನಿರ್ವಾಹಕ ಎಂಜಿನಿಯರ್, ಜಿಎಲ್ ಬಿಸಿ ಬೀಳಗಿ
ಇದನ್ನೂ ಓದಿ: H3N2 ವೈರಸ್ ಗೆ MBBS ವಿದ್ಯಾರ್ಥಿ ಕೊನೆಯುಸಿರು; ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ