Advertisement

ಜಿಂಬಾಬ್ವೆ ಮಾಜಿ ಅಧ್ಯಕ್ಷ ಮುಗಾಬೆ ನಿಧನ

01:21 AM Sep 07, 2019 | Team Udayavani |

ಹರಾರೆ: ಜಿಂಬಾಬ್ವೆಯನ್ನು ಸುಮಾರು ನಾಲ್ಕು ದಶಕಗಳ ಕಾಲ ತನ್ನ ಕಪಿಮುಷ್ಟಿಯಲ್ಲಿಟ್ಟು ಆಳಿದ ರಾಬರ್ಟ್‌ ಮುಗಾಬೆ(95) ಶುಕ್ರವಾರ ನಿಧನರಾಗಿದ್ದಾರೆ. 1980 ರಿಂದ 2017ರ ವರೆಗೆ ಜಿಂಬಾಬ್ವೆ ಅಧ್ಯಕ್ಷರಾಗಿದ್ದ ಮುಗಾಬೆ ಅವರ ಆರೋಗ್ಯ ಕಳೆದ ಕೆಲವು ವರ್ಷಗಳಿಂದ ತೀವ್ರ ಹದಗೆಟ್ಟಿತ್ತು. ಈ ಮಧ್ಯೆಯೇ, ದೇಶದಲ್ಲಿ ದುರಾಡಳಿತ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದುದರಿಂದ ಜನರು ಮುಗಾಬೆ ಆಡಳಿತದಿಂದ ಬೇಸತ್ತಿದ್ದರು. ಹೀಗಾಗಿ 2017ರಲ್ಲಿ ಮುಗಾಬೆ ನಂಬಿಕಸ್ಥ ಸೇನಾಧಿಕಾರಿಯೇ ಸೇನಾ ದಂಗೆ ನಡೆಸಿದರು. ಮುಗಾಬೆ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಎಮ್ಮರ್ಸನ್‌ ನಂಗಾಗ್ವಾರನ್ನೇ ಅಧ್ಯಕ್ಷರನ್ನಾಗಿ ನೇಮಿಸ ಲಾಗಿತ್ತು. ಸಿಂಗಾಪುರದಲ್ಲಿ ಕಳೆದ ಕೆಲವು ದಿನಗಳ ಕಾಲ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಯಾವ ಅನಾರೋಗ್ಯವಿತ್ತು ಮತ್ತು ಯಾವ ಸಮಸ್ಯೆಯಿಂದಾಗಿ ನಿಧನರಾದರು ಎಂಬ ಬಗ್ಗೆ ಮಾಹಿತಿಯನ್ನು ಸರ್ಕಾರ ನೀಡಿಲ್ಲ.

Advertisement

ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿದ್ದ ಮುಗಾಬೆ, ತನ್ನ ಅಧಿಕಾರದ ಆರಂಭದ ದಿನಗಳಲ್ಲಿ ಇಡೀ ಆಫ್ರಿಕಾ ದೇಶಗಳಲ್ಲೇ ಹೀರೋ ಆಗಿದ್ದರು. ಜಿಂಬಾಬ್ವೆ ನಂತರದಲ್ಲಿ ಒಂದಾದ ಮೇಲೆ ಒಂದು ದೇಶವು ಪ್ರಜಾಪ್ರಭುತ್ವ ಮಾದರಿ ಆಡಳಿತಕ್ಕೆ ಬದಲಾಗಲೂ ಮುಗಾಬೆ ಪ್ರೇರಕರಾಗಿದ್ದರು. ಆದರೆ 2000ನೇ ಇಸ್ವಿ ವೇಳೆಗೆ ಮುಗಾಬೆ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದಾಗಿ ಖಳನಾಯಕರಾಗಿದ್ದರು. ಅಷ್ಟೇ ಅಲ್ಲ, ಅಧಿಕಾರಕ್ಕೆ ಅಂಟಿಕೊಂಡು ಜಿಂಬಾಬ್ವೆಯ ಹೊಸ ತಲೆಮಾರಿನ ಜನರಲ್ಲಿ ತಿರಸ್ಕಾರಕ್ಕೂ ಒಳಗಾಗಿದ್ದರು.

ಸಂತಾಪ: ಮುಗಾಬೆ ನಿಧನಕ್ಕೆ ಭಾರತ ಸೇರಿದಂತೆ ಹಲವು ದೇಶಗಳು ಶೋಕ ವ್ಯಕ್ತಪಡಿಸಿವೆ. ಮುಗಾಬೆ ಅವರು ಭಾರತದ ನೈಜ ಸ್ನೇಹಿತ ಹಾಗೂ ಸ್ವಾತಂತ್ರ್ಯದ ಐಕಾನ್‌ ಆಗಿದ್ದವರು ಎಂದು ವಿದೇಶಾಂಗ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next