Advertisement

ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್‌ ಇನ್ನಿಲ್ಲ

01:00 AM Mar 05, 2019 | Team Udayavani |

ವೇಣೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್‌ (68) ಅವರು ಅನಾರೋಗ್ಯದಿಂದ ಮಾ. 4ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಜುಲೈ ತಿಂಗ‌ಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕಿಂತ ಮೊದಲು ಬೆಂಗಳೂರಿನ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. 

ಮೃತರು ತಾಯಿ ಗುಣವತಿಯಮ್ಮ, ಪತ್ನಿ ವನಿತಾ, ಪುತ್ರ, ಆರ್ಕಿಟೆಕ್ಟ್ ಪರಿಣಿತ್‌ ಮತ್ತು ಪುತ್ರಿ ಪವಿತ್ರಾ ಹಾಗೂ ಅಳಿಯ ವಿಕಾಸ್‌ ಅವರನ್ನು ಅಗಲಿದ್ದಾರೆ.

ಪುತ್ರಿ ಪವಿತ್ರಾ, ಅಳಿಯ ವಿಕಾಸ್‌ 8 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಧನಂಜಯರ ಆರೋಗ್ಯ ನೋಡಿಕೊಳ್ಳುತ್ತಿದ್ದರು.

ವೇಣೂರಿನಲ್ಲಿ  ಕೃಷಿ
ಧನಂಜಯ ಅವರು ಹುಟ್ಟೂರು ಬೆಳ್ತಂಗಡಿ ತಾಲೂಕು ವೇಣೂರಿನಲ್ಲಿ ಮನೆ, ಅಡಿಕೆ ತೋಟ ಹೊಂದಿದ್ದು, ತಾಯಿ ಗುಣವತಿಯಮ್ಮ ನೆಲೆಸಿದ್ದಾರೆ. ಅಣ್ಣ ಜೀವಂಧರ ಜೈನ್‌ ಧಾರವಾಡದಲ್ಲಿ, ಕಿರಿಯ ಸಹೋದರರಾದ ಪ್ರೊ| ಅಜಿತ್‌ ಕುಮಾರ್‌ ಜೈನ್‌ ಮತ್ತು ಭರತ್‌ರಾಜ್‌ ಆಳ್ವ ಬೆಂಗಳೂರಿನಲ್ಲಿ, ಸಹೋದರಿ ವಿಶಾಲಾಕ್ಷಿ ಮಂಗಳೂರಿನಲ್ಲಿದ್ದಾರೆ.

Advertisement

ಶಿಕ್ಷಣ, ಉದ್ಯೋಗ
ವೇಣೂರಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಮಂಗಳೂರಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರ್ತಿಗೊಳಿಸಿ, ಉಡುಪಿ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಮಂಗಳೂರಿನ ವಕೀಲ ಎಲ್‌.ಡಿ. ಬಲ್ಲಾಳರ ಬಳಿ ಕಿರಿಯ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಕಾರ್ಮಿಕ ಕಾನೂನಿನಲ್ಲಿ ಪರಿಣತರಾಗಿದ್ದು, ಕೈಗಾರಿಕಾ ವಿವಾದ ಬಗೆಹರಿಸಿದ್ದರು.

ಉಡುಪಿಯಲ್ಲಿ ಕಲಿಯುತ್ತಿದ್ದಾಗ ಡಾ| ವಿ.ಎಸ್‌. ಆಚಾರ್ಯ ಅವರಿಂದ ಪ್ರಭಾವಿತ ರಾಗಿದ್ದರು. 1983ರಲ್ಲಿ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 1991, 1996, 1998, 1999ರಲ್ಲಿ ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಯಾದರು. ವಾಜಪೇಯಿ ಸಂಪುಟದಲ್ಲಿ 1996ರಲ್ಲಿ ನಾಗರಿಕ ವಿಮಾನಯಾನ ಖಾತೆ, 1999ರಲ್ಲಿ ವಿತ್ತ ಖಾತೆಯ ಸಹಾಯಕ ಸಚಿವ, ಬಳಿಕ ಜವುಳಿ ಖಾತೆ ಸಚಿವರಾಗಿದ್ದರು. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಸರಕಾರ ಇದ್ದಾಗ ದಿಲ್ಲಿಯಲ್ಲಿ ವಿಶೇಷ ಪ್ರತಿನಿಧಿಯಾಗಿದ್ದರು.

ಅಂತಿಮ ದರ್ಶನ
ಪಾರ್ಥಿವ ಶರೀರವನ್ನು ಮಾ. 5ರಂದು ಬೆಳಗ್ಗೆ 7ರಿಂದ 10 ಗಂಟೆ ತನಕ ಬಿಜೈಯಲ್ಲಿರುವ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯ ಸಂಸ್ಕಾರಕ್ಕಾಗಿ ವೇಣೂರಿಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಧನಂಜಯ ಮತ್ತು ನಾನು ಹೈಸ್ಕೂಲ್‌ ವರೆಗೂ ಸಹಪಾಠಿಗಳು. 2012ರ ವೇಣೂರು ಮಹಾ ಮಸ್ತಕಾಭಿಷೇಕದ ಮುಂದಾಳತ್ವ ವಹಿಸಿದ್ದರು.  ವೇಣೂರಿಗೆ 1 ಕೋಟಿ ರೂ. ವೆಚ್ಚದ ಬಾಹುಬಲಿ ಸಭಾಭವನ ಕೊಡುಗೆಯಾಗಿ ನೀಡಿದವರು. 1.50 ಕೋಟಿ ರೂ. ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಿಸಿದ್ದರು.
– ಎಂ. ವಿಜಯರಾಜ ಅಧಿಕಾರಿ (ಸಹಪಾಠಿ), ನಿವೃತ್ತ ಉಪನ್ಯಾಸಕರು

Advertisement

Udayavani is now on Telegram. Click here to join our channel and stay updated with the latest news.

Next