ಇಂಫಾಲ್: ಮಣಿಪುರದ 19ನೇ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಶುಕ್ರವಾರ(ಜ.3) ಪ್ರಮಾಣ ವಚನ ಸ್ವೀಕರಿಸಿದರು.
ಇಂಫಾಲದ ರಾಜಭವನದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೃಷ್ಣಕುಮಾರ್ ಅವರು ಪ್ರಮಾಣ ವಚನ ಬೋಧಿಸಿದರು.
ಕಳೆದ ವರ್ಷ ಜುಲೈನಲ್ಲಿ ಮಣಿಪುರದ ಉಸ್ತುವಾರಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರ ಸ್ಥಾನವನ್ನು ಭಲ್ಲಾ ಅವರು ವಹಿಸಿಕೊಂಡರು.
ಭಲ್ಲಾ ಅವರು ಅಸ್ಸಾಂ-ಮೇಘಾಲಯ ಕೇಡರ್‌ನ 1984 ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರು ಆಗಸ್ಟ್ 2024 ರವರೆಗೆ ಸುಮಾರು ಐದು ವರ್ಷಗಳ ಕಾಲ ಭಾರತದ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಜಯ್ ಕುಮಾರ್ ಭಲ್ಲಾ ಪಂಜಾಬ್‌ನ ಜಲಂಧರ್ ಮೂಲದವರಾಗಿದ್ದಾರೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ವಿಧಾನಸಭೆ ಸ್ಪೀಕರ್ ಸತ್ಯವ್ರತ್ ಸಿಂಗ್, ರಾಜ್ಯ ಸಚಿವ ಸಂಪುಟ, ಶಾಸಕರು, ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್, ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೇಶಮ್ ಮೇಘಚಂದ್ರ ಸಿಂಗ್ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.