ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ದಂಪತಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮುಂಬೈನ ಜಿಯೋ ವರ್ಲ್ಡ್ ಕನ್ವೆಶನ್ ಸೆಂಟರ್ ನಲ್ಲಿ ಗುರುವಾರ (ಜುಲೈ 12) ರಾತ್ರಿ 8ಗಂಟೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬ್ರಿಟನ್ ನ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್, ಬೋರಿಸ್ ಜಾನ್ಸನ್ ಸೇರಿದಂತೆ ಗಣ್ಯಾತೀಗಣ್ಯರು ಮುಂಬೈಗೆ ಆಗಮಿಸಿದ್ದಾರೆ.
ಈಗಾಗಲೇ ಅನಂತ್-ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕಾ ರಿಯಲ್ಟಿ ಟಿವಿ ಐಕಾನ್ ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋ ಕಾರ್ಡಶಿಯಾನ್ ಬುಧವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಅಲ್ಲದೇ ಸ್ಯಾಮ್ ಸಂಗ್ ಸಿಇಒ ಹಾನ್ ಜಾಂಗ್ ಹೀ ಮುಂಬೈಗೆ ಆಗಮಿಸಿದ್ದಾರೆ.
ಜು.12ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅನಂತ್ ಅಂಬಾನಿ ವಿವಾಹ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ ಜನರಲ್ ಬಾನ್ ಕಿ ಮೂನ್ ದಂಪತಿ, ಪೀಟರ್ ಡೈಮಂಡಿಸ್, ಕಲಾವಿದ ಜೆಫ್ ಕೂನ್ಸ್, ಗುರು ಜೇ ಶೆಟ್ಟಿ, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ಕೆನಡಾ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಸೇರಿದಂತೆ ಹಲವು ಗಣ್ಯಾತೀಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಮಾರ್ಚ್ ನಲ್ಲಿ ಗುಜರಾತ್ ನ ಜಾಮ್ ನಗರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದಲ್ಜಿತ್ ದೋಸ್ಸಾಂಜ್, ಅರಿಜಿತ್ ಸಿಂಗ್, ಪಾಪ್ ತಾರೆ ರಿಹಾನಾ ಭಾಗವಹಿಸಿ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿಸಿದ್ದರು.
40 ದಿನಗಳ ಕಾಲ ಅನ್ನದಾನ:
ಪುತ್ರ ಅನಂತ್ ಅಂಬಾನಿ ವಿವಾಹದ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ನಿವಾಸ ಅಂಟಾಲಿಯಾ ಮುಂಭಾಗದಲ್ಲಿ ಅಂಬಾನಿ ಕುಟುಂಬ ಅನ್ನದಾನ ಏರ್ಪಡಿಸಿದೆ. 40 ದಿನಗಳ ಕಾಲ ಅನ್ನದಾನ ನಡೆಯಲಿದ್ದು, ಪ್ರತಿದಿನ 9 ಸಾವಿರ ಜನರಿಗೆ ಉಚಿತ ಊಟ ನೀಡುವ ಗುರಿ ಹೊಂದಿದೆ. ಜೂನ್ 5ರಿಂದ ಪ್ರಾರಂಭವಾದ ಈ ಅನ್ನದಾನ ಜುಲೈ 15ರವರೆಗೆ ನಡೆಯಲಿದೆ.
ಅಂಬಾನಿ ಕುಟುಂಬ ಇತ್ತೀಚೆಗೆ ಮುಂಬೈನಲ್ಲಿ 50 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಏರ್ಪಡಿಸಿ, ಆ ಎಲ್ಲಾ ವಧುಗಳಿಗೆ ನೀತು ಅಂಬಾನಿಯವರು ತಲಾ 1 ಲಕ್ಷ ರೂಪಾಯಿ ನೀಡಿದ್ದಾರೆ. ಜೊತೆಗೆ ಚಿನ್ನಾಭರಣಗಳನ್ನು ವಿತರಿಸಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:FIR: ಆಂಧ್ರ ಮಾಜಿ ಸಿಎಂ ಜಗನ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್… ಏನಿದು ಪ್ರಕರಣ