ಹೊಸದಿಲ್ಲಿ: ದೇಶದ ಕೆಲವು ರಾಜ್ಯಗಳ ರಾಜ್ಯಪಾಲರ ಬದಲಾವಣೆಯಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಕೆಲವೇ ದಿನಗಳ ಹಿಂದೆ ನಿವೃತ್ತರಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಎಸ್.ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡದ ಬೆಳುವಾಯಿ ಮೂಲದವರು.
ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಸ್ಟಿಸ್ ನಜೀರ್ ಅವರು 1958ರ ಜನವರಿ 5ರಂದು ಜನಿಸಿದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ಅವರು 2003ರ ಮೇ 12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ಸುಪ್ರೀಂ ಕೋರ್ಟ್‌ನಿಂದ ಬೀಳ್ಕೊಡುವ ಸಂದರ್ಭದಲ್ಲಿ, ಸಿಜೆಐ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ನಜೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿ, ಜಸ್ಟಿಸ್ ನಜೀರ್ 2019 ರವರೆಗೆ ಪಾಸ್‌ಪೋರ್ಟ್ ಸಹ ಹೊಂದಿರಲಿಲ್ಲ ಮತ್ತು ಕೆಲವು ವಾರಗಳ ಹಿಂದೆಯಷ್ಟೇ ಮೊದಲ ಬಾರಿಗೆ ದೇಶದಿಂದ ಹೊರಗೆ ಪ್ರಯಾಣಿಸಿದರು ಎಂದು ಹೇಳಿದ್ದರು.
ಇದನ್ನೂ ಓದಿ:ನಮ್ಮ ರಸ್ತೆ ಎಷ್ಟು ಕೆಟ್ಟದಾಗಿದೆಯೆಂದರೆ…: ಗಡ್ಕರಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್
ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಛತ್ತೀಸ್‌ಗಢದ ರಾಜ್ಯಪಾಲರಾಗಿದ್ದ ಅನುಸೂಯಾ ಉಯಿಕ್ಯೆ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಮಣಿಪುರದ ಗವರ್ನರ್ ಲಾ ಗಣೇಶನ್ ಅವರನ್ನು ನಾಗಾಲ್ಯಾಂಡ್ ಗವರ್ನರ್ ಆಗಿ ನೇಮಿಸಲಾಗಿದೆ. ಬಿಹಾರದ ಗವರ್ನರ್ ಫಾಗು ಚೌಹಾಣ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.