Advertisement

ಇದು 20 ವರ್ಷಗಳ ನಿಸ್ವಾರ್ಥ ಸೇವೆಗೆ ಸಿಕ್ಕಿದ ಉಡುಗೊರೆಯೇ?

01:35 AM Apr 21, 2019 | mahesh |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಆಘಾತ ವ್ಯಕ್ತಪಡಿಸಿದ್ದಾರೆ. ಶನಿವಾರ ತಮ್ಮ ನೇತೃತ್ವದಲ್ಲೇ ನಡೆದ ವಿಶೇಷ ಕೋರ್ಟ್‌ ಕಲಾಪದಲ್ಲಿ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ನನಗೆ ನಂಬಲು ಸಾಧ್ಯವಾಗದಂಥ ಆರೋಪಗಳನ್ನು ಹೊರಿಸಲಾಗಿದೆ. ಆರೋಪ ಮಾಡಿರುವ ಮಹಿಳೆಯು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದು, ಅವರ ವಿರುದ್ಧ ಎರಡು ಎಫ್ಐಆರ್‌ಗಳು ದಾಖಲಾಗಿವೆ. ಈ ಆರೋಪಗಳಿಗೆ ಪ್ರತಿಕ್ರಿಯಿಸುವಷ್ಟು ಕೆಳಮಟ್ಟಕ್ಕೆ ನಾನು ಇಳಿಯಲಾರೆ. ಒಬ್ಬ ನ್ಯಾಯಮೂರ್ತಿಯಾಗಿ 20 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಇದು ಅದಕ್ಕಾಗಿ ಸಿಕ್ಕಿದ ಉಡುಗೊರೆಯೇ? ಹಣಕಾಸಿನ ವಿಚಾರದಲ್ಲಿ ನನ್ನ ಮೇಲೆ ಯಾರೂ ಯಾವ ಆರೋಪವನ್ನೂ ಹೊರಿಸಲಾರರು. ಏಕೆಂದರೆ, ನನ್ನ ಬ್ಯಾಂಕ್‌ ಖಾತೆಯಲ್ಲಿರುವುದು ಕೇವಲ 6.80 ಲಕ್ಷ ರೂ.ಗಳು ಮಾತ್ರ. ಹೀಗಾಗಿ, ನನ್ನ ವಿರುದ್ಧ ಬೇರೇನಾದರೂ ಆರೋಪ ಹೊರಿಸಬೇಕಿತ್ತು. ಅದಕ್ಕಾಗಿ ಇಂಥ ಆರೋಪ ಹೊರಿಸಿದ್ದಾರೆ. ಇದರ ಹಿಂದೆ ಅತಿ ದೊಡ್ಡ ಶಕ್ತಿಯೊಂದು ಕೆಲಸ ಮಾಡಿದೆ. ಮುಂದಿನ ವಾರ ನನ್ನ ನೇತೃತ್ವದ ನ್ಯಾಯಪೀಠದ ಮುಂದೆ ಹಲವು ಸೂಕ್ಷ್ಮ ಪ್ರಕರಣಗಳು ವಿಚಾರಣೆಗೆ ಬರಲಿಕ್ಕಿವೆ. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆ ಕೂಡ ಮುಗಿಯುವ ಹಂತಕ್ಕೆ ಬಂದಿದೆ. ನಾನು ಯಾವುದೇ ಭಯವಿಲ್ಲದೇ ನನ್ನ ಕರ್ತವ್ಯವನ್ನು ನೆರವೇರಿಸುವುದು ಶತಃಸಿದ್ಧ ಎಂದು ಸಿಜೆಐ ರಂಜನ್‌ ಗೊಗೊಯ್‌ ಹೇಳಿದ್ದಾರೆ.

Advertisement

ಮಹಿಳೆಯ ಆರೋಪವೇನು?: ನ್ಯಾ| ಗೊಗೊಯ್‌ ವಿರುದ್ಧ ಮಹಿಳೆ 2 ಘಟನೆಗಳನ್ನು ವಿವರಿಸಿ ಆರೋಪ ಮಾಡಿದ್ದಾರೆ. ಸಿಜೆಐ ಗೊಗೊಯ್‌ ಅವರು ಹೇಳಿದಂತೆ ಕೇಳದ್ದಕ್ಕೆ ನನ್ನನ್ನು ಸೇವೆಯಿಂದ ವಜಾಗೊಳಿಸಲಾಯಿತು. ನನ್ನ ಅಂಗವಿಕಲ ಮೈದುನನನ್ನೂ ಕೆಲಸದಿಂದ ವಜಾ ಮಾಡಲಾ ಯಿತು. ನ್ಯಾ| ಗೊಗೊಯ್‌ ಮನೆಯಲ್ಲಿ ನನ್ನನ್ನು ಅವರ ಪತ್ನಿಯ ಕಾಲಿಗೆ ಎರಗುವಂತೆ ಮಾಡಲಾಯಿತು. ವಂಚನೆ ಪ್ರಕ ರಣ ದಲ್ಲಿ ನನ್ನನ್ನು ಮತ್ತು ಪತಿಯನ್ನು ಠಾಣೆಗೆ ಕರೆದೊಯ್ದು, ದೈಹಿಕ ಹಿಂಸೆ ನೀಡಲಾಯಿತು ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಕೂಡ ಇದನ್ನು ಸಂಪೂರ್ಣ ಕಟ್ಟುಕಥೆ ಹಾಗೂ ಸುಳ್ಳು ಆರೋಪ ಎಂದು ಹೇಳಿದೆ.

24ಕ್ಕೆ ವಿಚಾರಣೆ
ದೂರು ನೀಡಿರುವ ಮಹಿಳೆಯ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್‌ ಬೆದರಿಕೆ ಪ್ರಕರಣವಿದ್ದು, ಅವರಿಗೆ ಜಾಮೀನು ಮಂಜೂರಾಗಿತ್ತು. ಶನಿವಾರ ಪ್ರಕರಣದ ವಿಚಾರಣೆ ವೇಳೆ, “ಮಹಿಳೆಯು ದೂರುದಾರನಿಗೆ ಬೆದರಿಕೆ ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ರದ್ದು ಮಾಡಬೇಕು’ ಎಂದು ಪೊಲೀಸರು ಕೋರಿದ್ದಾರೆ. ದಿಲ್ಲಿ ನ್ಯಾಯಾಲಯ ವಿಚಾರಣೆಯನ್ನು ಎ. 24ಕ್ಕೆ ಮುಂದೂಡಿದೆ.

ಎಜಿ ಇದ್ದಿದ್ದು ಏಕೆ?
ಆರೋಪದ ಕುರಿತ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಸಿ. ವೇಣುಗೋಪಾಲ್‌ ಹಾಜರಾಗಿದ್ದೇಕೆ ಎಂದು ವಕೀಲೆ ಇಂದಿರಾ ಜೈಸಿಂಗ್‌ ಪ್ರಶ್ನಿಸಿದ್ದಾರೆ. ಪ್ರಕರಣಕ್ಕೂ, ಸರಕಾರಕ್ಕೂ ಸಂಬಂಧವೇ ಇಲ್ಲದಿರುವಾಗ ಎಜಿ ಏಕೆ ಹಾಜರಾದರು ಎಂದು ಪ್ರಶ್ನಿಸಿರುವ ಅವರು, ಸರಕಾರ ಸಿಜೆಐ ಗೊಗೊಯ್‌ರನ್ನು ಸಮರ್ಥಿಸಿಕೊಂಡಿದೆ. ಹೀಗಾಗಿ, ಸರಕಾರಕ್ಕೆ ಸಂಬಂಧಿಸಿದ ವಿಚಾರಣೆಗಳಿಂದ ಸಿಜೆಐ ಹಿಂದೆ ಸರಿಯಬೇಕು ಎಂದೂ ಆಗ್ರಹಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ವರದಿ ಮಾಡಿದ ಸ್ಕ್ರೋಲ್‌, ದಿ ಲೀಫ್ಲೆಟ್‌, ಕಾರವಾನ್‌ ಮತ್ತು ದಿ ವೈರ್‌ ನ್ಯೂಸ್‌ ಪೋರ್ಟಲ್‌ಗ‌ಳ ಪೈಕಿ “ಲೀಫ್ಲೆಟ್‌’ ಪೋರ್ಟಲ್‌ ಇಂದಿರಾ ಜೈಸಿಂಗ್‌ ಅವರಿಗೆ ಸೇರಿದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next