Advertisement

ಬಿಜೆಪಿ ಸರ್ಕಾರ ಹೆಚ್ಚು ದಿನ ಮುಂದುವರಿಯಲ್ಲ

08:48 PM Nov 01, 2020 | Suhan S |

ಹಾವೇರಿ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ವಾಮ ಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಭವಿಷ್ಯ ನುಡಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಆಸೆ-ಆಮಿಷ ತೋರಿಸಿ ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ. ದೌರ್ಜನ್ಯ, ಬೆದರಿಕೆ ತಂತ್ರದ ಮೂಲಕ ಬಿಜೆಪಿ ಅಧಿಕಾರಕ್ಕೇರುತ್ತಿದೆ. ಇದರಿಂದ ಜನತೆ ಬೇಸತ್ತಿದ್ದು, ಶಿರಾ, ಆರ್‌ ಆರ್‌ ನಗರ, ಪಶ್ಚಿಮ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಬಿಜೆಪಿ ದುರಾಡಳಿತ ನೋಡಿ ಜನರಿಗೆ ಸಾಕಾಗಿದೆ. ಮುಂಬರುವ ಚುನಾವಣೆಗಳಲ್ಲಿ ಆ ಪಕ್ಷ‌ಕ್ಕೆ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿ ಕಾಯ್ದೆಗಳು ಮರಣ ಶಾಸನವಾಗಿದೆ. ರೈತರು ಮತ್ತು ಜನಸಾಮಾನ್ಯರ ವಿರುದ್ಧ ಸರ್ಕಾರ ಕಾಯ್ದೆ ಜಾರಿ ತರುತ್ತಿದೆ. ಉಳುವವನೇ ಒಡೆಯ ಎಂಬುದನ್ನು ಈ ಸರ್ಕಾರ ಉಳ್ಳವನೇ ಒಡೆಯ ಎಂದು ಮಾಡಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ಡಿಜಿಪಿ ಕುಸಿದಿದ್ದು, ದೇಶ 20 ವರ್ಷ ಹಿಂದಕ್ಕೆ ಹೋಗಿದೆ. ಜನರ ಭಾವನೆ ಜೊತೆ ಚೆಲ್ಲಾಟವಾಡುತ್ತಿದೆ. ತಾನು ನೀಡಿದ ಯಾವ ಭರವಸೆಗಳನ್ನೂ ಬಿಜೆಪಿ ಈಡೇರಿಸಿಲ್ಲ. ಆದ್ದರಿಂದ ಕೆಲವೇ ದಿನಗಳಲ್ಲಿ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ ಎಂದರು.

ಹಾವೇರಿ ನಗರಸಭೆ ಅಧ್ಯಕ್ಷ  ಹಾಗೂ ಉಪಾಧ್ಯಕ್ಷ‌ ಚುನಾವಣೆ ಸಂದರ್ಭದಲ್ಲಿ ನಮ್ಮ ಸದಸ್ಯರ ಮೇಲೆ ಸುಳ್ಳು ಕೇಸ್‌ ಹಾಕಿಸಿ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು. ಇಲ್ಲಿಯ ನಗರಸಭೆ ಚುನಾವಣೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ, ಪಕ್ಷದ ಸದಸ್ಯರು ಅಧ್ಯಕ್ಷ‌, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರಸಭೆ ಕಾಂಗ್ರೆಸ್‌ ಸದಸ್ಯರ ಮೇಲೆ ಖೊಟ್ಟಿ ಅಟ್ರಾಸಿಟಿ ಕೇಸ್‌ ಹಾಕಿಸಿ ಒಳಗೆ ಹಾಕಿಸಲು ಬಿಜೆಪಿ ಸಿದ್ಧವಾಗಿತ್ತು. ಆದರೆ, ಕಾನೂನು ಅಡಿ ಹಾಗಾಗದಂತೆ ನೋಡಿಕೊಂಡೆವು. ಜಿಪಂ ನಲ್ಲೂ ಕಾಂಗ್ರೆಸ್‌ ಅಧಿಕಾರವಿದೆ. ಇನ್ನು ಮುಂದೆ ಬಿಜೆಪಿಯ ಸುಳ್ಳು ಭರವಸೆ ಗಳನ್ನು ಜನತೆ ನಂಬುವುದಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಹೇಳಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಸಂಖ್ಯಾಬಲ ಇಲ್ಲದಿದ್ದರೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಏರುವ ಹೊಸ ರೀತಿಯ ಪ್ರಯತ್ನ ಇಲ್ಲಿಂದಲೇ ಆರಂಭವಾಗುವುದಿತ್ತು. ಆದರೆ, ನಾವು ಅದಕ್ಕೆ ಅವಕಾಶ ಕೊಡದ್ದರಿಂದ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. ಈ ಹಿಂದೆ ಬ್ಯಾಡಗಿಯಲ್ಲಿ ಮತ್ತು ಈಗ ಹಾವೇರಿ ಕ್ಷೇತ್ರದಲ್ಲಿ ವಿರೋಧಿ ಗಳನ್ನು ಹಣಿಯಲು ಅಟ್ರಾಸಿಟಿ ಕೇಸ್‌ ಹಾಕಿಸುವ ಕೆಲಸ  ಈಗಿನ ಸ್ಥಳೀಯ ಶಾಸಕರಿಂದ ಆಗುತ್ತಿದೆ ಎಂದು ಆರೋಪಿಸಿದರು.

Advertisement

ಮಾಜಿ ಸಚಿವ ಬಸವರಾಜ ಶಿವಣ್ಣ ನವರ, ನಮ್ಮ ಸದಸ್ಯರ ಮೇಲೆ ರಾಜಕೀಯ ಪ್ರೇರಿತ ದೂರು ದಾಖಲಿ ಸಿರುವುದು ಅಧಿಕಾರಿಗಳಿಗೂ ಗೊತ್ತಾಗಿದೆ. ಆದ್ದರಿಂದ ನಮ್ಮ ಮನವಿಗೆ ಸ್ಪಂದಿಸಿ ನಗರಸಭೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ. ಇನ್ನು ಮುಂದೆ ನೂತನ ಅಧ್ಯ ಕ್ಷ‌‌ರು ಅಭಿವೃದ್ಧಿ ಕಡೆಗೆ ಗಮನ ಹರಿಸಲಿದ್ದಾರೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಅಧ್ಯಕ್ಷ‌ ಏಕನಾಥ ಬಾನು ವಳ್ಳಿ, ನಗರಸಭೆ ನೂತನ ಅಧ್ಯಕ್ಷ‌ ಸಂಜೀವ ಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ‌ ಕೊಟ್ರೇಶಪ್ಪ ಬಸೇಗಣ್ಣಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next