ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ಮುಖಂಡ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ (64ವರ್ಷ) ಶನಿವಾರ ಸಿಂಗಾಪುರದಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಆಸ್ಪತ್ರೆಯಲ್ಲಿ ಚಿಕಿಕ್ಸೆ ಪಡೆಯುತ್ತಿದ್ದರು ಎಂದು ವರದಿ ಹೇಳಿದೆ.
ಅಮರ್ ಸಿಂಗ್ ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಿಂಗ್ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆಪ್ತ ಸ್ನೇಹಿತರಾಗಿದ್ದರು. 2010ರಲ್ಲಿ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ಕೊಟ್ಟಿದ್ದರು. ಬಳಿಕ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ರಾಜ್ಯ ಸಭೆ ಸದಸ್ಯ ಅಮರ್ ಸಿಂಗ್ ಅವರು ಹತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ಅನಾರೋಗ್ಯಕ್ಕೀಡಾಗಿದ್ದು, ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು ಎಂದು ವರದಿ ತಿಳಿಸಿದೆ.
ಅಮರ್ ಸಿಂಗ್ ರಾಜಕೀಯ ಜೀವನ:
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಮ್ಯೂನಿಷ್ಟ್ ಪಕ್ಷ ಹಿಂಪಡೆದ ಪರಿಣಾಮ ಅಲ್ಪಬಹುಮತಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಮರ್ ಸಿಂಗ್. ಸಮಾಜವಾದಿ ಪಕ್ಷದ 39 ಸಂಸದರು ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದರು. 2010ರ ಜನವರಿ 6ರಂದು ಅಮರ್ ಸಿಂಗ್ ಅವರನ್ನು ಪಕ್ಷದ ಸಂಸದೀಯ ಮಂಡಳಿ ಹಾಗೂ ಪಕ್ಷದಿಂದ ಮುಲಾಯಂ ಸಿಂಗ್ ಯಾದವ್ ಉಚ್ಚಾಟಿಸಿಬಿಟ್ಟಿದ್ದರು. ಅಷ್ಟೇ ಅಲ್ಲ ಅಮರ್ ಸಿಂಗ್ ನಿಕಟವರ್ತಿ ಜಯಾ ಪ್ರದಾ ಅವರನ್ನೂ ಕೂಡಾ ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
2011ರಲ್ಲಿ ಅಮರ್ ಸಿಂಗ್ “ರಾಷ್ಟ್ರೀಯ ಲೋಕ್ ಮಂಚ್” ಎಂಬ ಸ್ವಂತ ಪಕ್ಷವನ್ನು ಸ್ಥಾಪಿಸಿದ್ದರು. 2012ರಲ್ಲಿ ನಡೆದಿದ್ದ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ 360 ಕ್ಷೇತ್ರಕ್ಕೆ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಒಂದೇ ಒಂದು ಸ್ಥಾನದಲ್ಲಿ ಸಿಂಗ್ ಪಕ್ಷ ಗೆಲುವು ಸಾಧಿಸಲಿಲ್ಲ. 2014ರಲ್ಲಿ ಅಮರ್ ಸಿಂಗ್ ರಾಷ್ಟ್ರೀಯ ಲೋಕ್ ದಳ ಪಕ್ಷ ಸೇರ್ಪಡೆಗೊಂಡಿದ್ದರು. 2014ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂಗ್ ಫತೇಪುರ್ ಸಿಕ್ರಿಯಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು. 2016ರಲ್ಲಿ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.