Advertisement

ಕಾಶ್ಮೀರದ ಮಾಜಿ ಭದ್ರತಾ ಸಿಬಂದಿಗೆ ಒಲಿಯಿತು ಐಪಿಎಲ್‌ ಗುತ್ತಿಗೆ!

06:50 AM Jan 30, 2018 | |

ಶ್ರೀನಗರ: ಪ್ರತಿ ಬಾರಿ ಐಪಿಎಲ್‌ ಹರಾಜು ನಡೆದಾಗಲೆಲ್ಲ ಕೋಟ್ಯಂತರ ರೂ. ಹಣದ ಹೊಳೆಯೇ ಹರಿಯುತ್ತದೆ. ಯಾರು ದುಬಾರಿ ಮೊತ್ತ ಪಡೆದ ಆಟಗಾರ ಎನ್ನುವ ಸುದ್ದಿ ದಪ್ಪಕ್ಷರದಲ್ಲಿ ಪ್ರಕಟವಾಗುತ್ತದೆ. ಇದರ ಜತೆಗೆ ಇನ್ನೊಂದಷ್ಟು ಬಡವರು, ಅನಾಮಧೇಯರ ಜೀವನವೇ ಬದಲಾದ ಹೃದಯಸ್ಪರ್ಶಿ ಘಟನೆಗಳೂ ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಈ ಬಾರಿ ಕಾಶ್ಮೀರದಿಂದ ವರದಿಯಾಗಿದೆ.

Advertisement

ಕಾಶ್ಮೀರದ ಕುಗ್ರಾಮವೊಂದರ ಕೂಲಿಕಾರ್ಮಿಕನ ಪುತ್ರ, 24 ವರ್ಷದ ಮಂಜೂರ್‌ ಅಹ್ಮದ್‌ ದಾರ್‌ 20 ಲಕ್ಷ ರೂ. ಗೆ ಕಿಂಗ್ಸ್‌ ಪಂಜಾಬ್‌ ತಂಡಕ್ಕೆ ಮಾರಾಟವಾಗಿದ್ದಾರೆ. ಪಂಜಾಬ್‌ಗಾಗಲೀ, ಐಪಿಎಲ್‌ಗಾಗಲೀ ಈ ಮೊತ್ತವೊಂದು ವಿಷಯವೇ ಅಲ್ಲ. ಆದರೆ ಹಿಂದೆ ಶೋರೂಂ ಒಂದರಲ್ಲಿ ಭದ್ರತಾ ಸಿಬಂದಿಯಾಗಿದ್ದ ಮಂಜೂರ್‌ ದಾರ್‌ಗಂತೂ ಜೀವನವೇ ಬದಲಾಯಿಸುವಂತಹ ಮೊತ್ತ!

ಕುಗ್ರಾಮದ ದಂತಕತೆ
ಉತ್ತರ ಕಾಶ್ಮೀರದ ಸಂಬಲ್‌ ನಗರದ ಸುಗನಪೊರಾ ಗಣಸ್ತಾನ್‌ ಎಂಬ ಹಳ್ಳಿಯಲ್ಲಿ ಮಂಜೂರ್‌ ದಾರ್‌ ಹುಟ್ಟಿದರು. 10 ವರ್ಷವಾಗಿದ್ದಾಗಲೇ ಕ್ರಿಕೆಟ್‌ ಆಡಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಕಾಶ್ಮೀರದ ಸಿಕ್ಸರ್‌ ಸರದಾರ ಎನಿಸಿಕೊಂಡರು. ಭರ್ಜರಿಯಾಗಿ ಸಿಕ್ಸರ್‌ ಬಾರಿಸುತ್ತಲೇ ಕ್ರಿಕೆಟ್‌ ಜೀವನದಲ್ಲಿ ಅರಳುತ್ತಾ ಹೋದರು.

ಕುಟುಂಬದಲ್ಲಿ ಇವರೇ ಹಿರಿಯಣ್ಣನಾದ ಕಾರಣ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯೊದಗಿತು. ಕುಟುಂಬದ ಬಡತನಕ್ಕೆ ಹೆಗಲುಕೊಡಬೇಕಾದರೆ ಇವರ ದುಡಿಮೆ ಅತ್ಯಗತ್ಯವಾಗಿತ್ತು. ಹೀಗಾಗಿ ಹಳ್ಳಿಯನ್ನು ತೊರೆದು ಶ್ರೀನಗರದ ಆಟೋಮೊಬೈಲ್‌ ಶೋರೂಂ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗ ಅವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ 2,800 ರೂ. ಮಾತ್ರ. ಮುಂದೆ ಅದು 3 ಸಾವಿರ ರೂ.ಗೇರಿತು.

ರಾತ್ರಿ ಭದ್ರತಾ ಸಿಬಂದಿಯಾಗಿ ಗೇಟು ಕಾಯುವುದು ಬೆಳಗ್ಗೆ ಶ್ರೀನಗರದ “ಶೇರ್‌ ಎ ಕಾಶ್ಮೀರ್‌ ಕ್ರಿಕೆಟ್‌ ಮೈದಾನ’ದಲ್ಲಿ ಕೆಲಸ ಮಾಡುವುದು ನಡೆದೇ ಇತ್ತು. ಈ ಶ್ರಮಕ್ಕೆ ಕಡೆಗೂ ಫ‌ಲ ದಕ್ಕಿತು. ಕಳೆದ ವರ್ಷ ಅವರು ಜಮು ¾ಕಾಶ್ಮೀರ ತಂಡದ ಪರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡಿದರು. ಇದು ಅವರ ಜೀವನವನ್ನೇ ಬದಲಿಸಿದ ಘಟನೆ. ಈ ವರ್ಷ ಅವರು ಕಾಶ್ಮೀರ ತಂಡದ ಪರ ಸಯ್ಯದ್‌ ಮುಷ್ತಾಕ್‌ ಅಲಿ ಕೂಟದಲ್ಲಿ ಆಡಿದ್ದಾರೆ. ಆದರೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

Advertisement

“ಪರಿಶ್ರಮಕ್ಕೆ ಬೆಲೆ ಸಿಕ್ಕಿತು’
ಕ್ರಿಕೆಟ್‌ ಆಡಲು ಶುರು ಮಾಡಿದರೂ ಅವರ ಆರ್ಥಿಕ ದಾರಿದ್ರéವೇನೂ ಕಡಿಮೆಯಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಐಪಿಎಲ್‌ ಅವರ ಕೈಹಿಡಿದಿದೆ. ಅವರಿಗೆ ಸಿಕ್ಕಿರುವ 20 ಲಕ್ಷ ರೂ. ಸಂಜೀವಿನಿಯಂತೆ ಕೆಲಸ ಮಾಡಬಲ್ಲದು. ಆದರೆ ಈ ಹಣವೇನು ಮಹತ್ವದ ಸಂಗತಿಯಲ್ಲ ಎನ್ನುತ್ತಾರೆ ಮಂಜೂರ್‌ ದಾರ್‌. ಹಣ ಎಷ್ಟು ಬಂತು, ಜನಪ್ರಿಯತೆ ಎಷ್ಟು ಬಂತು ಎನ್ನುವುದಕ್ಕಿಂತ ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿತು ಎನ್ನುವುದು ನನಗೆ ಅತ್ಯಂತ ಮಹತ್ವದ ಸಂಗತಿ ಎಂದು ಮಂಜೂರ್‌ ದಾರ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next